ನವದೆಹಲಿ: ಭಾರತ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ರೋಜರ್ ಬಿನ್ನಿ ಅವರು ಮಂಗಳವಾರ ಭಾರತೀಯ ಕ್ರಿಕೆಟ್ ಮಂಡಳಿಯ (ಬಿಸಿಸಿಐ) 36 ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಸ್ಥಾನವನ್ನು ತುಂಬಲಿದ್ದಾರೆ.
ರೋಜರ್ ಬಿನ್ನಿ ಬಗ್ಗೆ ಒಂದಿಷ್ಟು:ರೋಜರ್ ಬಿನ್ನಿ ಭಾರತದ ಮೊದಲ ಆಂಗ್ಲೋ-ಇಂಡಿಯನ್ ಕ್ರಿಕೆಟಿಗ. ಇವರು ಮೂಲತಃ ಸ್ಕಾಟ್ಲೆಂಡ್‌ನವರು, ನಂತರ ಅವರ ಕುಟುಂಬ ಭಾರತದಲ್ಲಿ ನೆಲೆಸಿತು.
1983 ರ ವಿಶ್ವಕಪ್‌ನಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಆಡುವಾಗ ಬಿನ್ನಿ ಸ್ಮರಣೀಯ ಪ್ರದರ್ಶನ ನೀಡಿದರು. ರೋಜರ್ ಬಿನ್ನಿ 1983 ರ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಅವರು ಟೂರ್ನಿಯಲ್ಲಿ ಎಂಟು ಪಂದ್ಯಗಳಲ್ಲಿ ಒಟ್ಟು 18 ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಟೂರ್ನಾಮೆಂಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 29ಕ್ಕೆ ನಾಲ್ಕು ವಿಕೆಟ್‌ಗಳು ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು. ಇದು ಅವರ ಏಕದಿನ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನವೂ ಆಗಿದೆ.
ಬಿಸಿಐನ ನೂತನ ಅಧ್ಯಕ್ಷ ರೋಜರ್ ಬಿನ್ನಿ 2000ನೇ ಇಸವಿಯಲ್ಲಿ ಭಾರತದ ಅಂಡರ್ 19 ಕೋಚ್ ಆಗಿ ನೇಮಕರಾದರು. ಆಗ ಅಂಡರ್-19 ತಂಡದ ನಾಯಕರಾಗಿ ಮೊಹಮ್ಮದ್ ಕೈಫ್ ಇದ್ದರು. ಆ ತಂಡದಲ್ಲಿ ಯುವರಾಜ್ ಸಿಂಗ್, ವೇಣುಗೋಪಾಲ್ ರಾವ್ ಕೂಡ ಇದ್ದರು. ರೋಜರ್ ಬಿನ್ನಿ ಕೋಚ್ ಆಗಿದ್ದ ವೇಳೆಯೇ 2000ದಲ್ಲಿ ಭಾರತ್ ಅಂಡರ್ 19 ತಂಡ ವಿಶ್ವಕಪ್ ಜಯಿಸಿತು.
1979 ಬೆಂಗಳೂರಿನಲ್ಲಿ ಪಾಕಿಸ್ತಾನದ ವಿರುದ್ಧ ಟೆಸ್ಟ್ ಪಂದ್ಯದ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ಒಂದು ವರ್ಷದ ನಂತರ 1980 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಕ್ರಿಕೆಟ್‌ನ ಚೊಚ್ಚಲ ಪಂದ್ಯ ಆಡಿದರು. 1987ರ ವರೆಗೆ ಅಂತರಾಷ್ಟ್ರೀಯ ಕಿಕೆಟ್ನಲ್ಲಿ ಭಾರತ ಪ್ರತಿನಿಧಿಸಿದರು. ರೋಜರ್ ಬಿನ್ನಿ ಒಟ್ಟು 27 ಟೆಸ್ಟ್ ಮತ್ತು 72 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಬೌಲಿಂಗ್ನಲ್ಲಿ ಟೆಸ್ಟ್ ಪಂದ್ಯದಲ್ಲಿ 47 ವಿಕೆಟ್ ಮತ್ತು 77 ವಿಕೆಟ್ ಏಕದಿನದಲ್ಲಿ ಪಡೆದಿದ್ದಾರೆ. 27 ಟೆಸ್ಟ್ ಪಂದ್ಯದಲ್ಲಿ 830 ಮತ್ತು 77 ಏಕದಿನ ಪಂದ್ಯದಲ್ಲಿ 629 ರನ್ ಗಳಿಸಿದ್ದಾರೆ.
ರೋಜರ್ ಬಿನ್ನಿ ಅವರ ಮಗ ಸ್ಟುವರ್ಟ್ ಕೂಡ ಭಾರತ ಅಂತರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದು, 2014ರಲ್ಲಿ ಬಾಂಗ್ಲಾದೇಶದ ವಿರುದ್ಧ ಕೇವಲ ನಾಲ್ಕು ರನ್‌ಗಳಿಗೆ ಆರು ವಿಕೆಟ್ ಪಡೆದು ಅವಿಸ್ಮರಣೀಯ ಸ್ಪೆಲ್ ಮಾಡಿದ್ದರು. ಟೆಸ್ಟ್ನಲ್ಲಿ ಸ್ಟುವರ್ಟ್ 21.56 ಸರಾಸರಿಯಲ್ಲಿ 194 ರನ್ ಗಳಿಸಿ ಮೂರು ವಿಕೆಟ್ ಪಡೆದಿದ್ದರು. ಅದೇ ಸಮಯದಲ್ಲಿ, 14 ಏಕದಿನಗಳಲ್ಲಿ 28.75 ರ ಸರಾಸರಿಯಲ್ಲಿ 230 ರನ್ ಮತ್ತು 20 ವಿಕೆಟ್‌ಗಳನ್ನು ಪಡೆದಿದ್ದರು. ಸ್ಟುವರ್ಟ್ ಮೂರು ಟಿ 20 ಗಳಲ್ಲಿ 120.69 ಸರಾಸರಿಯಲ್ಲಿ 35 ರನ್ ಮತ್ತು ಒಂದು ವಿಕೆಟ್ ಹೊಂದಿದ್ದರು. ಸ್ಟುವರ್ಟ್ ಬಿನ್ನಿ ಅವರ ಪತ್ನಿ ಮಾಯಾಂತಿ ಲ್ಯಾಂಗರ್ ಖಾಸಗೀ ಚಾನೆಲ್ನಲ್ಲಿ ಕ್ರೀಡಾ ನಿರೂಪಕಿಯಾಗಿದ್ದಾರೆ.
ಇದನ್ನೂ ಓದಿ :ಕನ್ನಡಿಗ ರೋಜರ್ ಬಿನ್ನಿ ಭಾರತ ಕ್ರಿಕೆಟ್ಗೆ ಬಾಸ್.. ಬಿಸಿಸಿಐ 36 ನೇ ಅಧ್ಯಕ್ಷರಾಗಿ ಆಯ್ಕೆ