ಹೈದರಾಬಾದ್: ಅಕ್ಟೋಬರ್ 5ರಿಂದ ಐಸಿಸಿ ಕ್ರಿಕೆಟ್ ವಿಶ್ವಕಪ್ ಹಬ್ಬ ಆರಂಭವಾಗಲಿದೆ. ಮೊದಲ ಪಂದ್ಯವು ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದೆ. ಪಂದ್ಯಗಳ ಟಿಕೆಟ್ಗಳು ಬಿಡುಗಡೆ ಆದ ದಿನವೇ ಮಾರಾಟವಾಗಿದ್ದು, ಅಭಿಮಾನಿಗಳು ಪಂದ್ಯಕ್ಕಾಗಿ ಎಷ್ಟು ಕಾತುರದಿಂದಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿತ್ತು.
ಸಾಮಾನ್ಯವಾಗಿ ಹೆಚ್ಚು ಸಿಕ್ಸರ್ ಬಾರಿಸುವ ಆಟಗಾರರನ್ನು ಅಭಿಮಾನಿಗಳು ಇಷ್ಟಪಡುತ್ತಾರೆ. ಏಕದಿನ ವಿಶ್ವಕಪ್‌ನಲ್ಲೂ ಸಾಕಷ್ಟು ಸಿಕ್ಸರ್ ಮತ್ತು ಬೌಂಡರಿಗಳು ಹರಿದು ಬರಲಿವೆ. 2023ರ ವಿಶ್ವಕಪ್ಗೂ ಮೊದಲು, ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಟಾಪ್-5 ಆಟಗಾರರು ಇವರು.
1. ಕ್ರಿಸ್ ಗೇಲ್: ಯುನಿವರ್ಸಲ್ ಬಾಸ್ ಎಂದೇ ಕರೆಸಿಕೊಳ್ಳುವ ಕ್ರಿಸ್ ಗೇಲ್ ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ. ಇವರು ವಿಶ್ವಕಪ್ ಇತಿಹಾಸದಲ್ಲಿ ಗೇಲ್ 49 ಸಿಕ್ಸರ್ ಬಾರಿಸಿದ್ದಾರೆ. ಚಳಿಗಾಲದಲ್ಲೂ ಬೌಲರ್‌ಗಳ ಬೆವರಿಳಿಸುವಂತಹ ಬ್ಯಾಟರ್ ಕ್ರಿಸ್ ಗೇಲ್. ಗೇಲ್ ಸಿಕ್ಸರ್ ಹೊಡೆಯಲು ಪ್ರಾರಂಭಿಸಿದಾಗ, ಬೌಲರ್‌ಗಳು ಬಾಲ್ ಎಸೆಯಲು ಸರಿಯಾದ ಸ್ಥಳ ಹುಡುಕಲು ಸಾಧ್ಯವಾಗುವುದಿಲ್ಲ. ಬೌಲರ್ ಎಲ್ಲಿ ಬಾಲ್ ಬೌಲ್ ಮಾಡುತ್ತಾರೋ, ಗೇಲ್ ಅಲ್ಲಿಂದಲೇ ಚೆಂಡನ್ನು ಮೈದಾನದಿಂದ ಹೊರಗಟ್ಟುತ್ತಾರೆ. 2003 ರಿಂದ 2019 ರವರೆಗೆ, ಗೇಲ್ 35 ವಿಶ್ವಕಪ್ ಪಂದ್ಯಗಳಲ್ಲಿ ಆಡಿದ್ದಾರೆ. ಇದರಲ್ಲಿ 34 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಮಾಡಿದ್ದು, 90.53 ಸ್ಟ್ರೈಕ್ ರೇಟ್‌ನಲ್ಲಿ 1186 ರನ್ ಗಳಿಸಿದ್ದಾರೆ.
2. ಎಬಿ ಡಿವಿಲಿಯರ್ಸ್: ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಇವರ ಬ್ಯಾಟಿಂಗ್ ನೋಡಿ ಏಲಿಯನ್ ಡಿವಿಲಿಯರ್ಸ್ ಎಂದಿದ್ದರು. ಕ್ರಿಕೆಟ್ ಮೈದಾನದ ಎಲ್ಲಾ ಭಾಗಗಳಿಗೂ ಸಿಕ್ಸ್ ಕಳುಹಿಸಿದ ಏಕೈಕ ಬ್ಯಾಟರ್ ಎಬಿಡಿ ಎಂದರೆ ಅತಿಶಯೋಕ್ತಿ ಆಗದು. ಏಕೆಂದರೆ ಅವರನ್ನು 360 ಬ್ಯಾಟರ್ ಎಂದೇ ಕರೆಯುತ್ತಾರೆ. ವಿಶ್ವಕಪ್‌ನ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ಸಿಕ್ಸರ್ ಇವರ ಹೆಸರಿನಲ್ಲಿದೆ. ವಿಶ್ವಕಪ್‌ನಲ್ಲಿ 37 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಎಬಿಡಿ ನಿಂತಲ್ಲೇ ಮೈದಾನದ ನಾಲ್ಕೂ ದಿಕ್ಕುಗಳಲ್ಲಿ ರನ್ ಗಳಿಸುತ್ತಾರೆ. 2007 ರಿಂದ 2015 ರ ವರೆಗೆ 23 ವಿಶ್ವಕಪ್ ಪಂದ್ಯಗಳಲ್ಲಿ 22 ಇನ್ನಿಂಗ್ಸ್ ಆಡಿದ್ದಾರೆ. ಗೇಲ್ ಅವರಿಂಗಿಂತ ಕಡಿಮೆ ಪಂದ್ಯದಲ್ಲಿ ಎಬಿಡಿ ಮೈದಾನಕ್ಕಿಳಿದಿದ್ದಾರೆ. ಡಿವಿಲಿಯರ್ಸ್ 22 ಪಂದ್ಯಗಳಲ್ಲಿ 117 ರ ಅತ್ಯುತ್ತಮ ಸ್ಟ್ರೈಕ್ ರೇಟ್‌ನಲ್ಲಿ 1207 ರನ್ ಗಳಿಸಿದ್ದಾರೆ.