ಇಂದೋರ್:ಕೆ.ಎಲ್.ರಾಹುಲ್ ಅವರನ್ನು ಟೆಸ್ಟ್ ಉಪನಾಯಕ ಸ್ಥಾನದಿಂದ ತೆಗೆದು ಹಾಕಿರುವುದು ಏನನ್ನೂ ಸೂಚಿಸುವುದಿಲ್ಲ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದರು. ತಂಡದ ಓಪನರ್ ಆಗಿರುವ ರಾಹುಲ್ ಕೆಲ ಸಮಯದಿಂದ ಕಳಪೆ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದು, ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯಲ್ಲೂ ವೈಫಲ್ಯ ಮುಂದುವರೆಸಿದ್ದಾರೆ. ಇದುವರೆಗೆ ಅವರು ಆಡಿರುವ ಎರಡು ಟೆಸ್ಟ್ ಪಂದ್ಯಗಳ ಮೂರು ಇನ್ನಿಂಗ್ಸ್ನಲ್ಲಿ ಕೇವಲ 38ರನ್ಗಳನ್ನಷ್ಟೇ ಕಲೆ ಹಾಕಿದ್ದಾರೆ.
ಹೀಗಾಗಿ, ಮೊದಲೆರಡು ಟೆಸ್ಟ್‌ಗೆ ಉಪನಾಯಕರಾಗಿದ್ದ ಅವರನ್ನು ಉಳಿದೆರಡು ಟೆಸ್ಟ್ ಪಂದ್ಯಗಳಿಗೆ ಉಪನಾಯಕನ ಜವಾಬ್ದಾರಿಯಿಂದ ಮುಕ್ತಗೊಳಿಸಿ ಆಟಗಾರನಾಗಿ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಕಳಪೆ ಪ್ರದರ್ಶನ ತೋರುತ್ತಿರುವ ಕ್ರಿಕೆಟಿಗನನ್ನು ತಂಡದಿಂದ ಕೈಬಿಡಬೇಕು ಹಾಗೂ ಅವರ ಬದಲಿಗೆ ಫಾರ್ಮ್‌ನಲ್ಲಿರುವ ಶುಭಮನ್ ಗಿಲ್‌ರನ್ನು ಆಯ್ಕೆ ಮಾಡಬೇಕು ಎಂದು ಮಾಜಿ ಕ್ರಿಕೆಟಿಗರು ಒತ್ತಾಯಿಸಿದ್ದರು. ಕೆ.ಎಲ್.ರಾಹುಲ್ರನ್ನು ಉಪನಾಯಕ ಸ್ಥಾನದಿಂದ ಕೆಳಗಿಳಿಸಿರುವುದು ತಂಡದಿಂದ ಕೈಬಿಡುವ ಮುನ್ಸೂಚನೆ ಎಂಬೆಲ್ಲ ಮಾತುಗಳೂ ಕೇಳಿ ಬಂದಿದ್ದವು.
ಆಸೀಸ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಾರಂಭಕ್ಕೂ ಮುನ್ನ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ರೋಹಿತ್ ಶರ್ಮಾ, ಉಪ ನಾಯಕನ ಸ್ಥಾನದಿಂದ ಅವರನ್ನು ತೆಗೆದುಹಾಕಿದ್ದು ಏನನ್ನೂ ಸೂಚಿಸುವುದಿಲ್ಲ. ತಂಡದ ಎಲ್ಲಾ 17 ಆಟಗಾರರಿಗೂ ಆಡಲು ಅವಕಾಶವಿದೆ. ತಂಡವು ಪ್ರತಿಭಾವಂತರನ್ನು ಬೆಂಬಲಿಸುತ್ತದೆ. ಕಳೆದ ಪಂದ್ಯದ ಬಳಿಕವೂ ನಾನು ಈ ಬಗ್ಗೆ ಮಾತನಾಡಿದ್ದೆ. ವೈಫಲ್ಯ ಎದುರಿಸುತ್ತಿರುವ ಆಟಗಾರರಿಗೆ ತಮ್ಮನ್ನು ತಾವು ಸಾಬೀತುಪಡಿಸಲು ಹೆಚ್ಚಿನ ಸಮಯ ನೀಡಲಾಗುತ್ತದೆ ಎಂದರು.