ಮುಂಬೈ: ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆ ಎಲ್ ರಾಹುಲ್ ಸೋಮವಾರ ಯಶಸ್ವಿ ಅಪೆಂಡಿಕ್ಸ್ ಸರ್ಜರಿಗೆ ಒಳಗಾಗಿದ್ದಾರೆ. ಒಂದು ವಾರ ಕ್ವಾರಂಟೈನ್ ಮುಗಿಸಿ ಬಯೋಬಬಲ್ನಲ್ಲಿರುವ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಕೆ ಎಲ್ ರಾಹುಲ್ ಚಾರ್ಟರ್ ಫ್ಲೈಟ್ ಮೂಲಕ ಮುಂಬೈಗೆ ತೆರಳಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಒಂದು ವಾರದೊಳಗೆ ರಾಹುಲ್ ಮತ್ತೆ ದೈಹಿಕ ಚಟುವಟಿಕೆ ಆರಂಭಿಸಬಹುದೆಂದು ವೈದ್ಯರು ತಿಳಿಸಿದ್ದಾರೆಂದು ಇಎಸ್ಪಿಎನ್ ಕ್ರಿಕ್ಇನ್ಫೋ ವರದಿ ಮಾಡಿದೆ.
ಭಾನುವಾರ ನಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ಮುಂದಿನ ಒಂದೆರಡು ಪಂದ್ಯಗಳಿಗೆ ರಾಹುಲ್ ಅಲಭ್ಯರಾಗಲಿದ್ದಾರೆ ಎಂದು ತಿಳಿಸಿತ್ತು. ಶನಿವಾರ ರಾತ್ರಿ ಅವರು ಹೊಟ್ಟೆ ನೋವೆಂದು ತಿಳಿಸಿದ್ದರು.