ಆಲೂರ್ (ಬೆಂಗಳೂರು): ಕೆಎಲ್ ರಾಹುಲ್ ಏಷ್ಯಾಕಪ್ನ ಗುಂಪು ಹಂತದ ಪಂದ್ಯಗಳಿಗೆ ಲಭ್ಯ ಇರುವುದಿಲ್ಲ ಎಂದು ಕೋಚ್ ರಾಹುಲ್ ದ್ರಾವಿಡ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಭಾರತ ಮಧ್ಯಮ ಕ್ರಮಾಂಕದ ಬಗ್ಗೆ ಗೊಂದಲ ಇದೆ ಎಂದು ಹೇಳುತ್ತಿದ್ದಾರೆ. ಆದರೆ, 18-20 ತಿಂಗಳ ಮೊದಲೇ ಯಾರು ಆಡುತ್ತಾರೆ ಎಂಬುದರ ಬಗ್ಗೆ ನನಗೆ ಅರಿವಿತ್ತು ಎಂದು ದ್ರಾವಿಡ್ ಹೇಳಿದ್ದಾರೆ.
ನಾಳೆಯಿಂದ (ಆಗಸ್ಟ್ 30) ಏಷ್ಯಾಕಪ್ ಪಂದ್ಯಾವಳಿ ಆರಂಭವಾಗಲಿದೆ. ಮೊದಲ ಪಂದ್ಯ ಪಾಕಿಸ್ತಾನವು ನೇಪಾಳದ ನಡುವೆ ಮುಲ್ತಾನ್ನಲ್ಲಿ ನಡೆಯಲಿದೆ. ಭಾರತಕ್ಕೆ ಮೊದಲ ಪಂದ್ಯ ಪಾಕಿಸ್ತಾನದ ಜೊತೆಗೆ ಸೆಪ್ಟೆಂಬರ್ 2 ರಂದು ಕ್ಯಾಂಡಿಯಲ್ಲಿ ಇರಲಿದೆ. ಭಾರತ ಸೆ.4 ರಂದು ನೇಪಾಳ ವಿರುದ್ಧ ಆಡಲಿದೆ. ಈ ಎರಡು ಪಂದ್ಯಗಳಿಗೆ ರಾಹುಲ್ ಇರುವುದಿಲ್ಲ.
ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಆಲೂರಿನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿ, ಕೆ ಎಲ್ ರಾಹುಲ್ ಗಾಯದಿಂದ ಚೇತರಿಸಿಕೊಂಡ ನಂತರ ಉತ್ತಮ ಪ್ರಗತಿಯಲ್ಲಿದ್ದಾರೆ. ಸೆಪ್ಟೆಂಬರ್ 4ರ ವರೆಗೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮೇಲ್ವಿಚಾರಣೆಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
"ಕೆಎಲ್ ರಾಹುಲ್ ಈ ವಾರ ಉತ್ತಮ ಚೇತರಿಕೆ ಕಂಡಿದ್ದಾರೆ. ಅವರು ತಂಡದಲ್ಲಿ ಪಾಲ್ಗೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ, ಲಂಕಾ ಪ್ರವಾಸದಲ್ಲಿ ಅವರು ನಮ್ಮೊಂದಿಗೆ ತೆರಳುವುದಿಲ್ಲ. ಕ್ಯಾಂಡಿಯಲ್ಲಿ ನಡೆಯುವ ಎರಡು ಪಂದ್ಯಗಳಿಗೆ ರಾಹುಲ್ ಲಭ್ಯ ಇರುವುದಿಲ್ಲ. ನಾವು ಲಂಕಾದಲ್ಲಿದ್ದಾಗ ಅವರು ಎನ್ಸಿಎಯಲ್ಲಿ ಅಭ್ಯಾಸದಲ್ಲಿರುತ್ತಾರೆ. ರಾಹುಲ್ ಅವರನ್ನು ಸೆಪ್ಟೆಂಬರ್ 4 ರಂದು ಮರುಮೌಲ್ಯಮಾಪನ ಮಾಡಿ ನಂತರ ತಂಡಕ್ಕೆ ಸೇರಿಸಿಕೊಳ್ಳುತ್ತೇವೆ. ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಏಷ್ಯಾ ಕಪ್ನಲ್ಲಿ ಉತ್ತಮ ಕಮ್ಬ್ಯಾಕ್ ಆಗುವ ಸಾಧ್ಯತೆ ಇದೆ. ಶ್ರೇಯಸ್ ಅಯ್ಯರ್ ಸಂಪೂರ್ಣ ಫಿಟ್ ಆಗಿದ್ದು, ಅಭ್ಯಾಸದ ವೇಳೆ ಬ್ಯಾಟಿಂಗ್ನಿಂದ ಹಿಡಿದು ಎಲ್ಲ ರೀತಿಯ ಪರೀಕ್ಷೆಗಳಲ್ಲಿ ಸಂಪೂರ್ಣ ಪಾಸ್ ಆಗಿದ್ದಾರೆ"ಎಂದು ದ್ರಾವಿಡ್ ಹೇಳಿದ್ದಾರೆ.