ಮುಂಬೈ:ಐಪಿಎಲ್ ವೇಳೆ ಗಾಯಗೊಂಡಿದ್ದ ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಜೂನ್ 2 ರಂದು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡದ ಜೊತೆ ತೆರಳಲು ಸಜ್ಜಾಗಿದ್ದಾರೆ.
ಕೋವಿಡ್ 19ನಿಂದ ಮುಂದೂಡಲ್ಪಟ್ಟಿರುವ ಐಪಿಎಲ್ ವೇಳೆ ಕೆಎಲ್ ರಾಹುಲ್ ಅಕ್ಯೂಟ್ ಅಪೆಂಡಿಸೈಟಿಸ್ಗೆ ಒಳಗಾಗಿದ್ದರು. ನಂತರ ಇಂಗ್ಲೆಂಡ್ ಪ್ರವಾಸಕ್ಕೆ ಘೋಷಿಸಿದ ತಂಡದಲ್ಲಿ ಇವರ ಹೆಸರನ್ನು ಸೂಚಿಸಿದ್ದ ಆಯ್ಕೆ ಸಮಿತಿ, ಫಿಟ್ನೆಸ್ ಸಾಬೀತುಪಡಿಸಿದರೆ ಮಾತ್ರ ಪರಿಗಣಿಸುವುದಾಗಿ ತಿಳಿಸಿತ್ತು.
ಅವರು(ರಾಹುಲ್) ಚೆನ್ನಾಗಿದ್ದಾರೆ ಮತ್ತು ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಇಂಗ್ಲೆಂಡ್ಗೆ ಭಾರತ ತಂಡದ ಜೊತೆಯಲ್ಲಿ ಪ್ರಯಾಣಿಸಲಿದ್ದಾರೆ ಎಂದು ರಾಹುಲ್ಗೆ ತುಂಬಾ ಹತ್ತಿರವಾಗಿರುವ ಮೂಲ ಐಎಎನ್ಎಸ್ಗೆ ಮಾಹಿತಿ ನೀಡಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಆರಂಭಗೊಳ್ಳಲು ಇನ್ನು ತುಂಬಾ ಕಾಲಾವಕಾಶವಿದೆ. ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಗೆ ಮತ್ತೆ ಒಂದೂವರೆ ತಿಂಗಳು ಕಾಲಾವಕಾಶ ಸಿಗುತ್ತದೆ. ಈ ಹಿಂದೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಗಾಯಾಳು ವೃದ್ಧಿಮಾನ್ ಸಹಾ ಅವರನ್ನು ತಂಡದ ಜೊತೆ ಕರೆದುಕೊಂಡು ಹೋಗಿ ಅಲ್ಲಿ ಪುನಶ್ಚೇತನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಈಗಲೂ ಸಮಯ ಇರುವುದರಿಂದ ರಾಹುಲ್ಗೂ ಅವಕಾಶ ನೀಡಬಹುದು ಎಂದು ಮೂಲ ಹೇಳಿದೆ.
ಕೆಎಲ್ ರಾಹುಲ್ ಟೆಸ್ಟ್ ಚಾಂಪಿಯನ್ಶಿಪ್ನ ಮೊದಲ ಸರಣಿಯಾಗಿದ್ದ 2019ರಲ್ಲಿ ವೆಸ್ಟ್ ಇಂಡೀಸ್ ತಮ್ಮ ಕೊನೆಯ ಟೆಸ್ಟ್ ಆಡಿದ್ದರು. ದೀರ್ಘ ಸಮಯದ ಬಳಿಕ ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾದರಾದರೂ ಗಾಯಗೊಂಡು ಮತ್ತೆ ತವರಿಗೆ ಹಿಂತಿರುಗಿದ್ದರು.
ಭಾರತ ತಂಡ ಜೂನ್ 2 ರಂದು ಇಂಗ್ಲೆಂಡ್ಗೆ ಪ್ರವಾಸ ಕೈಗೊಳ್ಳಲಿದೆ. ಜೂನ್ 18-22ರವರೆಗೆ ಟೆಸ್ಟ್ ಚಾಂಪಿಯನ್ಶಿಪ್ ನಡೆಯಲಿದೆ.
ಇದನ್ನು ಓದಿ: ಕೊಹ್ಲಿ, ರೋಹಿತ್ ಅಲ್ಲ, ಈತ ಭಾರತದ ಅಪಾಯಕಾರಿ - ಗೇಮ್ ಚೇಂಜರ್ ಬ್ಯಾಟ್ಸ್ಮನ್: ಕಿವೀಸ್ ಕೋಚ್