ಪಾರ್ಲ್:ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದ ವೇಳೆ ನಾಯಕ ಕೆ ಎಲ್ ರಾಹುಲ್ ಹಾಗೂ ಹರಿಣಗಳ ತಂಡದ ಸ್ಪಿನ್ನರ್ ಕೇಶವ್ ಮಹಾರಾಜ ನಡುವೆ ಸ್ವಾರಸ್ಯಕರ ಮಾತುಕತೆ ನಡೆದಿದೆ. ಇದು ಸ್ಟಂಪ್ ಮೈಕ್ನಲ್ಲಿ ರೆಕಾರ್ಡ್ ಆಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
6ನೇ ವಿಕೆಟ್ ಪತನದ ಬಳಿಕ ಕೇಶವ್ ಮಹಾರಾಜ್ ಕ್ರೀಸ್ಗೆ ಬಂದಿದ್ದು, ಆಗ ಮೈದಾನದಲ್ಲಿ 'ರಾಮ್ ಸಿಯಾ ರಾಮ್' ಹಾಡು ಡಿಜೆ ಮೂಲಕ ಪ್ಲೇ ಆಗುತ್ತಿತ್ತು. ಆಗ ಕೀಪಿಂಗ್ ಮಾಡುತ್ತಿದ್ದ ರಾಹುಲ್, ಕ್ರೀಸ್ನಲ್ಲಿ ಬ್ಯಾಟಿಂಗ್ಗೆ ಸಿದ್ಧರಾಗುತ್ತಿದ್ದ ಮಹಾರಾಜ್ಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ.
''ಪ್ರತಿ ಸಲ ನೀವು ಬ್ಯಾಟಿಂಗ್ಗೆ ಬಂದಾಗಲೂ 'ರಾಮ್ ಸಿಯಾ ರಾಮ್' ಹಾಡನ್ನು ಡಿಜೆಯವರು ಪ್ಲೇ ಮಾಡುತ್ತಾರೆ'' ಎಂದು ಹೇಳಿದ್ದಾರೆ. ಆಗ ಪ್ರತಿಕ್ರಿಯಿಸಿದ ಮಹಾರಾಜ್ ನಗುತ್ತಲೇ 'ಹೌದು' ಎಂದಿದ್ದಾರೆ. ಅಲ್ಲದೇ, ಪಂದ್ಯದಲ್ಲಿ ಮಹಾರಾಜ್ ಬೌಲಿಂಗ್ ಮಾಡಲು ಬಂದಿದ್ದಾಗಲೂ ಕೂಡ ಇದೇ ಹಾಡು ಮೈದಾನದಲ್ಲಿ ಮೊಳಗಿತ್ತು ಎಂಬುದು ವಿಶೇಷ.
ಕೆಲ ದಿನಗಳ ಹಿಂದೆ ನಡೆದ ಏಕದಿನ ವಿಶ್ವಕಪ್ ಸಂದರ್ಭದಲ್ಲಿ ಮಹಾರಾಜ್ ಅವರು ಹಿಂದೂ ಮಂತ್ರ 'ಓಂ' ಲೋಗೋ ಹೊಂದಿದ್ದ ಬ್ಯಾಟ್ ಬಳಸಿರುವುದು ಗಮನ ಸೆಳೆದಿತ್ತು. ಇದೀಗ ರಾಹುಲ್ ಹಾಗೂ ಮಹಾರಾಜ್ ನಡುವಿನ ಸಂಭಾಷಣೆ ಕುರಿತಂತೆಯೂ ಅಭಿಮಾನಿಗಳು ಪ್ರತಿಕ್ರಿಯಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳನ್ನು ಹಾಕಿದ್ದಾರೆ.
ಇದನ್ನೂ ಓದಿ:ಸಂಜು ಸ್ಯಾಮ್ಸನ್ ಚೊಚ್ಚಲ ಶತಕ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 78 ರನ್ಗಳ ಜಯ; ಸರಣಿ ಕೈವಶ
ಇನ್ನು, ಮೂರನೇ ಪಂದ್ಯವನ್ನು 78 ರನ್ಗಳಿಂದ ಗೆದ್ದ ಭಾರತ, 2018ರ ಬಳಿಕ ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಸರಣಿ ಗೆದ್ದ ಸಾಧನೆ ಮಾಡಿದೆ. ಮಧ್ಯಮ ಕ್ರಮಾಂಕದ ಬ್ಯಾಟರ್ ಸಂಜು ಸ್ಯಾಮ್ಸನ್ ಚೊಚ್ಚಲ ಶತಕ ದಾಖಲಿಸಿ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ. ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಸ್ಯಾಮ್ಸನ್ ಶತಕ ಹಾಗೂ ತಿಲಕ್ ವರ್ಮಾ ಅವರ ಅರ್ಧಶತಕದ ಬಲದಿಂದ ಹರಿಣಗಳಿಗೆ 297 ರನ್ ಗೆಲುವಿನ ಗುರಿ ನೀಡಿತ್ತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 218 ರನ್ಗಳಿಗೆ ಆಲೌಟ್ ಆಗುವ ಮೂಲಕ 78 ರನ್ಗಳ ಸೋಲು ಕಂಡಿತು. ತಂಡದ ಪರ ಟಾನಿ ಜಾರ್ಜಿ 81 ರನ್ ಗಳಿಸಿದ್ದು ಬಿಟ್ಟರೆ, ಬೇರಾವ ಬ್ಯಾಟರ್ಗಳೂ ಕೂಡ ತಕ್ಕ ಆಟ ಪ್ರದರ್ಶಿಸುವಲ್ಲಿ ವಿಫಲರಾದರು.
ಇದನ್ನೂ ಓದಿ:ದಕ್ಷಿಣ ಆಫ್ರಿಕಾ ಗೆಲುವಿಗೆ ಮುಳುವಾದ ಸಾಯಿ ಸುದರ್ಶನ್ ಲಾಂಗ್ಡೈವ್ ಕ್ಯಾಚ್..! ಹೇಗಿತ್ತು ಗೊತ್ತಾ ಆ ಕ್ಷಣ!!