ಕರ್ನಾಟಕ

karnataka

ETV Bharat / sports

ಕೆ.ಎಲ್‌.ರಾಹುಲ್ ತಂಡವನ್ನು ಬಿಕ್ಕಟ್ಟಿನಿಂದ ಪಾರು ಮಾಡುವ ವ್ಯಕ್ತಿ: ಬ್ಯಾಟಿಂಗ್ ಕೋಚ್‌ - Boxing Day Test

Boxing Day Test: ಸೆಂಚುರಿಯನ್​ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​​ನಲ್ಲಿ ಕೆ.ಎಲ್.ರಾಹುಲ್​ ಅವರ ಏಕಾಂಗಿ ಪ್ರದರ್ಶನಕ್ಕೆ ಬ್ಯಾಟಿಂಗ್​ ಕೋಚ್​​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Vikram Rathour
ವಿಕ್ರಮ್ ರಾಥೋರ್

By ETV Bharat Karnataka Team

Published : Dec 27, 2023, 10:32 PM IST

ಸೆಂಚುರಿಯನ್(ದಕ್ಷಿಣ ಆಫ್ರಿಕಾ): ಇಲ್ಲಿನ ​ಸೂಪರ್‌ಸ್ಪೋರ್ಟ್ ಪಾರ್ಕ್​ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲಿ ಮೊದಲ ದಿನ ಬ್ಯಾಟಿಂಗ್​ ಮಾಡಲು ಭಾರತ ಪರದಾಡಿತಾದರೂ, ಕನ್ನಡಿಗ ಕೆ.ಎಲ್.ರಾಹುಲ್ ಮಾತ್ರ ಬೌನ್ಸಿ ಪಿಚ್​ನಲ್ಲಿ ಹರಿಣಗಳ ಬೌಲಿಂಗ್​ ದಾಳಿಗೆ ದಿಟ್ಟವಾಗಿ ಬ್ಯಾಟ್​ ಬೀಸುವಲ್ಲಿ ಯಶಸ್ವಿಯಾದರು. ಮೊದಲ ದಿನದ ರಾಹುಲ್​ ಆಟಕ್ಕೆ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಭಾರತ ತಂಡಕ್ಕೆ ರಾಹುಲ್ ಬಿಕ್ಕಟ್ಟಿನಿಂದ ಪಾರು ಮಾಡುವ ವ್ಯಕ್ತಿಯಾಗುತ್ತಿದ್ದಾರೆ" ಎಂದು ಹೇಳಿದ್ದಾರೆ.

ಎರಡನೇ ದಿನದಾಟದ ಆರಂಭಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಥೋಡ್​​, "ಕಳೆದೆರಡು ದಿನಗಳಿಂದ ಮಳೆಯಾಗುತ್ತಿದ್ದರಿಂದ ಪಿಚ್​ ಟ್ರಿಕ್ಕಿ ಆಗಿತ್ತು. ಇದರ ಜೊತೆಗೆ ದಕ್ಷಿಣ ಆಫ್ರಿಕಾದಲ್ಲಿ ಬ್ಯಾಟಿಂಗ್​ ಮಾಡುವುದು ಕಠಿಣ ಸವಾಲು. ಹಾಗೆ ನೋಡಿದರೆ ದಿನದಾಟದ ಅಂತ್ಯಕ್ಕೆ ತಂಡ ಉತ್ತಮ ಸ್ಕೋರ್​ ಮಾಡಿದೆ. ಆದರೆ ನಮ್ಮ ಬಳಿ ವಿಕೆಟ್​ಗಳಿಲ್ಲ ಅಷ್ಟೇ" ಎಂದರು.

ಕೆ.ಎಲ್.ರಾಹುಲ್​ ಮೊದಲ ದಿನದಾಟದ ಅಂತ್ಯಕ್ಕೆ 70 ರನ್​ ಗಳಿಸಿ ಅಜೇಯವಾಗಿದ್ದರು. ಈ ಬಗ್ಗೆ ಮಾತನಾಡುತ್ತಾ, "ರಾಹುಲ್​ ತಮ್ಮ ಜವಾಬ್ದಾರಿ ಅರಿತು ಬ್ಯಾಟಿಂಗ್​ ಮಾಡುತ್ತಿದ್ದಾರೆ. ಅವರು ತಂಡಕ್ಕೆ ಬಿಕ್ಕಟ್ಟಿನಿಂದ ಪಾರು ಮಾಡುವ ವ್ಯಕ್ತಿಯಾಗುತ್ತಿದ್ದಾರೆ. ಅವರು ತಮ್ಮ ಗೇಮ್​ ಪ್ಲಾನ್​ ಅನ್ನು ಉತ್ತಮವಾಗಿ ಕಾರ್ಯರೂಪಕ್ಕೆ ತಂದರು. ಅಲ್ಲದೇ ಶಾಟ್​ ಸೆಲೆಕ್ಷನ್​ನಲ್ಲಿಯೂ ಎಡವಲಿಲ್ಲ" ಎಂದು ತಿಳಿಸಿದರು.

ಪಿಚ್​ ತೇವಾಂಶದಿಂದ ಕೂಡಿದೆ ಎಂಬ ಕಾರಣಕ್ಕೆ ತೆಂಬಾ ಬವುಮಾ ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡರು. ಅದರಂತೆ ಭಾರತದ ಬ್ಯಾಟಿಂಗ್​ ಬಲವನ್ನು ಮೊದಲ ಸೆಷನ್​ನಲ್ಲೇ ಕುಸಿಯುವಂತೆ ಅವರ ಬೌಲರ್​ಗಳು ನೋಡಿಕೊಂಡರು. ಭಾರತದ ಆರಂಭಿಕ ಮೂವರು ಬ್ಯಾಟರ್​ಗಳು ತಂಡ 24 ರನ್​ ತಲುಪುವಷ್ಟರಲ್ಲೇ ಪೆವಿಲಿಯನ್​ ಹಾದಿ ಹಿಡಿದಿದ್ದರು. ವಿರಾಟ್, ಅಯ್ಯರ್​, ಅಶ್ವಿನ್​, ಶಾರ್ದೂಲ್​ ಮತ್ತು ಬುಮ್ರಾ ವಿಕೆಟ್​​ ಸಹ ತಂಡ ಕಳೆದುಕೊಂಡಿತು. ಆದರೆ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ರಾಹುಲ್​ ಕೆಳ ಕ್ರಮಾಂಕದ ಜತೆಯಾಟ ಸಿಗದಿದ್ದರೂ ತಮ್ಮ ಇನ್ನಿಂಗ್ಸ್​ ಕಟ್ಟಿದರು.

ಮೊದಲ ದಿನದಾಟದ ಅಂತ್ಯಕ್ಕೆ ಅಜೇಯ 70 ರನ್ ​ಗಳಿಸಿದ್ದ ರಾಹುಲ್​, ಎರಡನೇ ದಿನ ಅದನ್ನು ಶತಕವಾಗಿ ಪರಿವರ್ತಿಸಿದರು. ರಾಹುಲ್​ ಅವರ 101 ರನ್​ಗಳ ಸಹಾಯದಿಂದ ಟೀಮ್​ ಇಂಡಿಯಾ ಮೊದಲ ಇನ್ನಿಂಗ್ಸ್​ ಮುಕ್ತಾಯಕ್ಕೆ 245 ರನ್​ ಗಳಿಸಿತು.

ಇದನ್ನೂ ಓದಿ:ಅಫ್ಘಾನ್​ ಟಿ20 ಸರಣಿಗೂ ಪಾಂಡ್ಯ​ ಇರಲ್ಲ​​: ಐಪಿಎಲ್​ಗೆ ಫಿಟ್​ ಆಗುವ ನಿರೀಕ್ಷೆ

ABOUT THE AUTHOR

...view details