ನವದೆಹಲಿ:ಕೆ.ಎಲ್.ರಾಹುಲ್ ರನ್ ಬರ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲೂ ಮುಂದುವರೆದಿದೆ. ಆದರೂ ಅವರಿಗೆ ಮತ್ತೆ ಮತ್ತೆ ಅವಕಾಶ ನೀಡುತ್ತಿರುವ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿವೆ. ಮೊದಲ ಟೆಸ್ಟ್ನಲ್ಲಿ ಕೆಎಲ್ಆರ್ ವೈಫಲ್ಯಕ್ಕೆ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಟ್ವೀಟ್ ಮಾಡಿ ಆಯ್ಕೆಗಾರರ ಮೇಲೆ ಅಸಮಾಧಾನ ಹೊರಹಾಕಿದ್ದರು. ಇದೀಗ ಎರಡನೇ ಟೆಸ್ಟ್ನಲ್ಲೂ ಮತ್ತೆ ಅವರು ಎಡವಿದ್ದಾರೆ. ಹೀಗಾಗಿ, "ರಾಹುಲ್ ತಂಡ ಸೇರ್ಪಡೆಯಿಂದ ಅನೇಕ ಯುವ ಪ್ರತಿಭೆಗಳಿಗೆ ಅನ್ಯಾಯವಾಗುತ್ತಿದೆ" ಎಂದು ವೆಂಕಟೇಶ್ ಪ್ರಸಾದ್ ಕಿಡಿ ಕಾರಿದ್ದಾರೆ.
ಲೋಕೇಶ್ ರಾಹುಲ್ ಅವರು ಪ್ರಸಕ್ತ ಸಾಲಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯದಲ್ಲಿ 71 ಎಸೆತಗಳನ್ನು ಎದುರಿಸಿ ಕೇವಲ 20 ರನ್ಗಳಿಸಿದ್ದರು. ಎರಡನೇ ಮ್ಯಾಚ್ನ ಮೊದಲ ಇನ್ನಿಂಗ್ಸ್ನಲ್ಲಿ 41 ಚೆಂಡುಗಳಲ್ಲಿ ಒಂದು ಸಿಕ್ಸ್ ಸಹಿತ 17 ರನ್ಗಳಿಸಿ ಔಟಾಗಿದ್ದರು. 2022 ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಟೆಸ್ಟ್ನಲ್ಲಿ ಅರ್ಧಶತಕ ಗಳಿಸಿದ್ದರು. ಅದೇ ಸರಣಿಯಲ್ಲಿ ಶತಕ ದಾಖಲಿಸಿದ್ದರು. ಇದಾದ ನಂತರ ಅವರ ಬ್ಯಾಟ್‌ನಿಂದ ಹೆಚ್ಚು ರನ್ ಹರಿದುಬಂದಿಲ್ಲ. ಸುಮಾರು ಒಂದು ವರ್ಷದಿಂದೀಟೆಗೆ ಅವರು ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ಎಡವುತ್ತಿದ್ದಾರೆ.
ಹೀಗಾಗಿ, ರಾಹುಲ್‌ಗೆ ನೀಡಲಾಗುತ್ತಿರುವ ಅವಕಾಶಗಳಿಗೆ ಟೀಕೆಗಳು ಹೆಚ್ಚಾಗುತ್ತಿವೆ. ಫಾರ್ಮ್ನಲ್ಲಿರುವ ಬ್ಯಾಟರ್ಗಳಿಗೆ ಟೀಂನಲ್ಲಿ ಸ್ಥಾನವೇ ಸಿಗುತ್ತಿಲ್ಲ ಎಂದು ಆಯ್ಕೆಗಾರರ ನಡೆಯನ್ನು ಟೀಕಿಸಲಾಗುತ್ತಿದೆ. 47 ಟೆಸ್ಟ್ ಆಡಿರುವ ರಾಹುಲ್ 2,641 ರನ್ಗಳಿಸಿದ್ದು, 33.08 ರ ಸರಾಸರಿಯಲ್ಲಿ ಬ್ಯಾಟ್ ಬೀಸುತ್ತಿದ್ದಾರೆ. 51 ಸ್ಟ್ರೈಕ್ ರೇಟ್ನಲ್ಲಿ 7 ಶತಕ ಮತ್ತು 13 ಅರ್ಧಶತಕ ದಾಖಲಿಸಿದ್ದಾರೆ.