ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಆಯ್ಕೆ ಸಮಿತಿ ಸರ್ಫರಾಜ್ ಖಾನ್ರನ್ನು ಆಯ್ಕೆ ಮಾಡಿಲ್ಲ ಎಂಬ ಕಾರಣಕ್ಕೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು. ಆರಂಭಿಕ ಕೆ.ಎಲ್.ರಾಹುಲ್ ಎರಡು ಟೆಸ್ಟ್ಗಳಲ್ಲಿ ರನ್ ಗಳಿಸಲು ಪರದಾಡುತ್ತಿರುವುದನ್ನು ಕಂಡು ಸಾಮಾಜಿಕ ಜಾಲತಾಣದಲ್ಲಿ ಆಯ್ಕೆಗಾರರ ವಿರುದ್ಧ ಇನ್ನಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಉಪನಾಯಕನ ಸ್ಥಾನವನ್ನು ಕೆ.ಎಲ್.ರಾಹುಲ್ಗೆ ನೀಡಲಾಗಿದ್ದು, ತಂಡದಿಂದ ಕೈ ಬಿಟ್ಟು ಬೆಂಚ್ನಲ್ಲಿ ಕೂರಿಸಲು ಆಗುತ್ತಿಲ್ಲ ಎಂಬ ಟೀಕೆಗಳು ಕೇಳಿ ಬರುತ್ತಿದೆ.
ಮಾಜಿ ಕ್ರಿಕೆಟಿಗೆ ವೆಂಕಟೇಶ್ ಪ್ರಸಾದ್ ಮೊದಲ ಪಂದ್ಯದಲ್ಲಿ ರಾಹುಲ್ ಬ್ಯಾಟ್‌ನಿಂದ ರನ್ ಬರದಿದ್ದಕ್ಕೆ ಜರಿದಿದ್ದರು. ಅಲ್ಲದೇ ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 17ಕ್ಕೆ ಔಟ್ ಆದಾಗ ಆರಂಭಿಕರ ಸ್ಥಾನ ತುಂಬಲು ಹಲವು ಪ್ರತಿಭೆಗಳಿವೆ. 8 ವರ್ಷಗಳಿಂದ ಅಂತಾರಾಷ್ಟ್ರೀಯ ಟೆಸ್ಟ್ ಆಡುತ್ತಿದ್ದು, 33 ಸರಾಸರಿಯಲ್ಲಿ ರನ್ ಗಳಿಸುತ್ತಿದ್ದಾರೆ ಎಂದು ಅಂಕಿ-ಅಂಶ ಸಮೇತ ರಾಹುಲ್ ಆಟದಲ್ಲಿ ರನ್ ಬರುತ್ತಿಲ್ಲ ಎಂಬುದನ್ನು ಒತ್ತಿ ಹೇಳಿದ್ದರು.
ಮತ್ತೆ ಮತ್ತೆ ಫ್ಲಾಫ್: ಮೊದಲ ಇನ್ನಿಂಗ್ಸ್ನಲ್ಲಿ 17 ರನ್ ಓಟ್ ಆಗಿದ್ದ ರಾಹುಲ್ ಎರಡನೇ ಇನ್ನಿಂಗ್ಸ್ನಲ್ಲಿ 1 ರನ್ಗೆ ವಿಕೆಟ್ ಒಪ್ಪಿಸಿದ್ದಾರೆ. ಅವರ ಬ್ಯಾಡ್ ಫಾರ್ಮ್ ಮುಂದುವರಿದಿದೆ. 1 ರನ್ ಗಳಿಸಿ ಔಟ್ ಆದ ರಾಹುಲ್ರನ್ನು ಬಾಕಿ ಇದ್ದ ಲೀಡ್ ಅನ್ನು ಹೊಡೆದು ತಮ್ಮ ಜವಾಬ್ದಾರಿ ಮುಗಿಸಿದ್ದಾರೆ ಎಂದು ಟ್ವಿಟರ್ನಲ್ಲಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ಕಳೆದ 5 ವರ್ಷದಲ್ಲಿ ರಾಹುಲ್ ಆಟ:2014ರಲ್ಲಿ ಮೆಲ್ಬೋರ್ನ್ ಸ್ಟೇಡಿಯಂನಲ್ಲಿ ಡೆಬ್ಯು ಮಾಡಿದ ಕೆ.ಎಲ್.ರಾಹುಲ್ ಮೊದಲ ಐದು ವರ್ಷದಲ್ಲಿ ಉತ್ತಮ ಸರಾಸರಿ ಕಾಯ್ದುಕೊಂಡಿದ್ದರು. 2014 ರಿಂದ 2017ರ ವರೆಗೆ 33 ಇನ್ನಿಂಗ್ ಆಡಿದ ಅವರು 1428 ರನ್ಗಳಿಸಿದ್ದರು. 44.62ರ ಸರಾಸರಿಯಲ್ಲಿ ಬ್ಯಾಟ್ ಬೀಸುತ್ತಿದ್ದ ಅವರು 10 ಅರ್ಧಶತಕ ಮತ್ತು 4 ಶತಕ ಗಳಿಸಿದ್ದರು.
2018 ರಿಂದ 2023ರ ವರೆಗೆ 47 ಇನ್ನಿಂಗ್ಸ್ ಆಡಿದ್ದು, 1213 ರನ್ ಗಳಿಸಿದ್ದಾರೆ. 26.36ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಲೋಕೇಶ್ ರಾಹುಲ್ 3 ಅರ್ಧಶತಕ ಮತ್ತು ಶತಕಗಳನ್ನು ಮಾತ್ರ ಗಳಿಸಿದ್ದಾರೆ. ಐದು ವರ್ಷದಿಂದ ಟೆಸ್ಟ್ನಲ್ಲಿ ರನ್ ಕದಿಯುವುದರಲ್ಲಿ ವಿಫಲರಾಗುತ್ತಿದ್ದಾರೆ. 2022 ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಟೆಸ್ಟ್ನಲ್ಲಿ ಅರ್ಧಶತಕ ಗಳಿಸಿದ್ದರು. ಅದೇ ಸರಣಿಯಲ್ಲಿ ಶತಕ ದಾಖಲಿಸಿದ್ದರು. ಇದಾದ ನಂತರ ಅವರ ಬ್ಯಾಟ್‌ನಿಂದ ಹೆಚ್ಚು ರನ್ ಹರಿದುಬಂದಿಲ್ಲ. ಸುಮಾರು ಒಂದು ವರ್ಷದಿಂದೀಚೆಗೆ ಅವರು ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ಸೋಲುತ್ತಿದ್ದಾರೆ.
ಟ್ವಿಟರ್ನಲ್ಲಿ ಟ್ರೋಲ್:ರಾಹುಲ್ 1 ರನ್ಗೆ ಔಟಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ದಾಳಿ ನಡೆಯುತ್ತಿದೆ. ರಾಹುಲ್ ಔಟಾಗುತ್ತಿದ್ದಂತೆ ವೆಂಕಟೇಶ್ ಪ್ರಸಾದ್ ಅಭಿ ಮಜಾ ಆಗಯಾ ಎಂದು ಹೇಳುತ್ತಾರೆ ಎಂಬಂತೆ ಜಾನಿ ಲಿವರ್ ಫೋಟೋ ಬಳಸಿ ತಮಾಷೆ ಮಾಡುತ್ತಿದ್ದಾರೆ. ಬಾಕಿ ಇದ್ದ ಒಂದು ರನ್ ಲೀಡ್ ಅನ್ನು ಪೂರೈಸಿ ಮರಳಿದ್ದಾರೆ, ರಾಹುಲ್ರನ್ನು ಟೀಮ್ನಿಂದ ತೆಗೆಯಲು ಕ್ರಮವೇನು ಎಂಬಿತ್ಯಾದಿ ಟ್ರೋಲ್ಗಳು ಹರಿದಾಡುತ್ತಿವೆ.
ಆರಂಭಿಕ ಸ್ಥಾನದ ಸ್ಪರ್ಧೆಯಲ್ಲಿ ಯಾರಿದ್ದಾರೆ?:ತಂಡದ ಸದಸ್ಯರ ಪಟ್ಟಿಯಲ್ಲಿ ಫಾರ್ಮ್ನಲ್ಲಿರುವ ಆರಂಭಿಕ ಶುಭಮನ್ ಗಿಲ್ ಇದ್ದು ಅವರಿಗೆ ತಂಡದಲ್ಲಿ ಸ್ಥಾನ ಸಿಗುತ್ತಿಲ್ಲ. ಗಿಲ್ ನ್ಯೂಜಿಲೆಂಡ್ ಎದುರಿನ ಸರಣಿಯ ಮೊದಲ ಏಕದಿನದಲ್ಲಿ ದ್ವಿಶತಕ, ಮೂರನೇ ಏಕದಿನದಲ್ಲಿ ಮತ್ತು ಮೊದಲ ಟಿ20ಯಲ್ಲಿ ಶತಕ ಗಳಿಸಿ ಜನವರಿಯ ಐಸಿಸಿಯ ತಿಂಗಳ ಕ್ರಿಕೆಟಿಗ ಪ್ರಶಸ್ತಿಗೂ ಭಾಜನರಾಗಿದ್ದರು.
ಗಿಲ್ ಅಲ್ಲದೇ, ಮಯಾಂಕ್ ಅಗರ್ವಾಲ್ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ದೇಶಿ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಅವರು ಮತ್ತೆ ಅಂತಾರಾಷ್ಟ್ರೀಯ ತಂಡದಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ವಿಕೆಟ್ ಕೀಪರ್ ಕಮ್ ಬ್ಯಾಟರ್ ಆಗಿರುವ ಇಶನ್ ಕಿಶನ್ ಏಕದಿನದಲ್ಲಿ ಆರಂಭಿಕರಾಗಿ ದ್ವಿಶತಕ ಗಳಿಸಿದ್ದಾರೆ. ಪೃಥ್ವಿ ಶಾ ಸಹ ಆಯ್ಕೆಗೆ ಎದುರು ನೋಡುತ್ತಿದ್ದಾರೆ. ಶಿಖರ್ ಧವನ್ಗೆ ಕೆಲ ಪ್ರವಾಸಗಳ ನಾಯಕತ್ವ ನೀಡಲಾಗುತ್ತಿದ್ದು, ಅವರೂ ಬಹಳ ಸಮಯದಿಂದ ಟೆಸ್ಟ್ ಕ್ರಿಕೆಟ್ನಿಂದ ದೂರ ಉಳಿದಿದ್ದಾರೆ.
ಇದನ್ನೂ ಓದಿ:"ರನ್ ಬರ ಮುಂದುವರೆದಿದೆ, ಪ್ರತಿಭಾವಂತರಿಗೆ ಅನ್ಯಾಯ ಆಗ್ತಿದೆ": ಮತ್ತೆ ರಾಹುಲ್ ವಿರುದ್ಧ ವೆಂ'ಕಿಡಿ'