ಮುಂಬೈ:ಪಂಜಾಬ್ ಕಿಂಗ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಕಿಂಗ್ಸ್ ನೀಡಿದ್ದ 137 ರನ್ಗಳ ಸಾಧಾರಣ ಮೊತ್ತವನ್ನು 14.3 ಓವರ್ಗಳಲ್ಲಿ 141 ರನ್ ಗಳಿಸಿ ವಿಜಯದ ನಗೆ ಬೀರಿದೆ.
ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದ ಆ್ಯಂಡ್ರೆ ರಸೆಲ್ ಕಿಂಗ್ಸ್ ಬೌಲರ್ಗಳನ್ನು ಬೆಂಡೆತ್ತಿದರು. ಕೇವಲ 31 ಎಸೆತಗಳಲ್ಲಿ ಭರ್ಜರಿ 8 ಸಿಕ್ಸರ್, 2 ಬೌಂಡರಿ ಸಮೇತ 70 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು.
ಆರಂಭಿಕರಾಗಿ ಬ್ಯಾಟಿಂಗ್ಗೆ ಇಳಿದ ಅಜಿಂಕ್ಯಾ ರಹಾನೆ(12), ವೆಂಕಟೇಶ್ ಅಯ್ಯರ್(3) ಮತ್ತೊಮ್ಮೆ ವಿಫಲರಾದರು. ಬಳಿಕ ಬಂದ ನಾಯಕ ಶ್ರೇಯಸ್ ಅಯ್ಯರ್ (26) ರನ್ ಗಳಿಸಿದರು. ನಿತೀಶ್ ರಾಣಾ(0) ಬಂದ ವೇಗದಲ್ಲೇ ವಾಪಸ್ ಆದರು.
ಈ ವೇಳೆ, ಕಣಕ್ಕಿಳಿದ ವೆಸ್ಟ್ ಇಂಡೀಸ್ ದೈತ್ಯ ಆ್ಯಂಡ್ರೆ ರಸೆಲ್ ಮೈದಾನದ ಎಲ್ಲ ದಿಕ್ಕಿನಲ್ಲೂ ಚೆಂಡನ್ನು ಗಾಳಿಯಲ್ಲಿ ಹಾರಿಸುವ ಮೂಲಕ ಕಿಂಗ್ಸ್ ತಂಡದ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. ಒಂದು ಹಂತದಲ್ಲಿ 51 ರನ್ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡ ರಸೆಲ್ರ ಅಬ್ಬರದ ಬ್ಯಾಟಿಂಗ್ ಮುಂದೆ ಪಂಜಾಬ್ಸ್ ಕಿಂಗ್ಸ್ ಬೌಲರ್ಗಳು ಮಂಡಿಯೂರಿದರು. ಇನ್ನು ರಸೆಲ್ಗೆ ಸ್ಯಾಮ್ ಬಿಲ್ಲಿಂಗ್ಸ್ (24) ಉತ್ತಮ ಸಾಥ್ ನೀಡಿದರು.
ಇದಕ್ಕೂ ಮುನ್ನ ಉಮೇಶ್ ಯಾದವ್ರ ಬೆಂಕಿ ಉಗುಳುವಂತಹ ಬೌಲಿಂಗ್ ದಾಳಿಯಿಂದ ತತ್ತರಿಸಿದ ಪಂಜಾಬ್ ಕಿಂಗ್ಸ್ ತಂಡ 18.2 ಓವರ್ಗಳಲ್ಲಿ 137 ರನ್ ಗಳಿಸಲು ಮಾತ್ರ ಶಕ್ತವಾಗಿ ಆಲೌಟ್ ಆಯಿತು. ಆರಂಭಿಕನಾಗಿ ಕಣಕ್ಕಿಳಿದ ಪಂಜಾಬ್ ತಂಡದ ನಾಯಕ ಮಯಾಂಕ್ ಅಗರ್ವಾಲ್(1) ಮೊದಲ ಓವರ್ನಲ್ಲೇ ವಿಕೆಟ್ ಒಪ್ಪಿಸಿ ಹೊರನಡೆದರು. ಶಿಖರ್ ಧವನ್(16), ಲೈಮ್ ಲಿವಿಂಗ್ಸ್ಟೋನ್(19), ರಾಜ್ ಬಾವಾ(11) ರನ್ ಗಳಿಸಲಷ್ಟೇ ಸಾಧ್ಯವಾಯಿತು.
ಎಲ್ಲ ಬ್ಯಾಟ್ಸಮನ್ಗಳು ಪೆವಿಲಿಯನ್ ಪರೇಡ್ ಮಾಡುತ್ತಿದ್ದರೆ, ಇದೇ ಮೊದಲ ಬಾರಿಗೆ ಐಪಿಎಲ್ ಆಡುತ್ತಿರುವ ಶ್ರೀಲಂಕಾದ ಭುನುಕಾ ರಾಜಪಕ್ಸೆ(31) 3 ಬೌಂಡರಿ, 3 ಸಿಕ್ಸರ್ ಸಿಡಿಸಿ ಅಭಿಮಾನಿಗಳನ್ನು ರಂಜಿಸಿದರು. ಅಲ್ಲದೇ ತಂಡದ ಅತ್ಯಧಿಕ ಸ್ಕೋರರ್ ಎನಿಸಿಕೊಂಡರು. ಅಲ್ಲದೇ, 9 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಬಾಲಂಗೋಚಿ ಕಗಿಸೋ ರಬಾಡಾ 4 ಬೌಂಡರಿ, 1 ಭರ್ಜರಿ ಸಿಕ್ಸರ್ ಸಮೇತ 25 ರನ್ ಗಳಿಸಿದರು.
ಓದಿ:ಉಮೇಶ್ ಯಾದವ್ ಮಿಂಚು... 137 ರನ್ಗಳಿಗೆ ಪಂಜಾಬ್ ಕಿಂಗ್ಸ್ ಆಲೌಟ್