ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಗೆಲ್ಲೋ ಕುದುರೆಗಳಿಗೆ ಮಾತ್ರ ಬೆಲೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕಳೆದ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಫೈನಲ್ ಪ್ರವೇಶಿಸಲು ನೆರವಾಗಿದ್ದ ವೆಂಕಟೇಶ್ ಅಯ್ಯರ್ ಮತ್ತು ವರುಣ್ ಚಕ್ರವರ್ತಿ ಅವರನ್ನು ಫ್ರಾಂಚೈಸಿ ಸೋಮವಾರ ನಡೆಯುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧದ ಪಂದ್ಯದಿಂದ ಕೈಬಿಟ್ಟಿದೆ.
2021 ಆವೃತ್ತಿಯ ಐಪಿಎಲ್ನಲ್ಲಿ ವೆಂಕಟೇಶ್ ಅಯ್ಯರ್ ಫೈಂಡ್ ಆಫ್ ದಿ ಸೀಸನ್ ಎಂದು ಗುರುತಿಸಿಕೊಂಡಿದ್ದರು. ಅವರು ಕೆಕೆಆರ್ ಪರ ದುಬೈನಲ್ಲಿ ನಡೆದಿದ್ದ ದ್ವಿತೀಯಾರ್ಧದಲ್ಲಿ ಆಡಿದ 10 ಪಂದ್ಯಗಳಿಂದ 4 ಅರ್ಧಶತಕಗಳ ಸಹಿತ 370 ರನ್ಗಳಿಸಿದ್ದರು. ಮೊದಲಾರ್ಧದಲ್ಲಿ 7 ಪಂದ್ಯಗಳಲ್ಲಿ 2 ಗೆಲುವು ಮತ್ತು 5 ಸೋಲು ಕಂಡಿದ್ದ ಕೆಕೆಆರ್ ವೆಂಕಟೇಶ್ ಅಯ್ಯರ್ ಅವರ ಅತ್ಯುತ್ತಮ ಪ್ರದರ್ಶನದಿಂದ ಪ್ಲೇ ಆಫ್ನಲ್ಲಿ ಅವಕಾಶ ಪಡೆದಿದ್ದಲ್ಲದೇ, ಫೈನಲ್ ಪ್ರವೇಶಿಸಲು ಯಶಸ್ವಿಯಾಗಿತ್ತು . ಇದೇ ಪ್ರದರ್ಶನ ಅವರನ್ನು ಭಾರತ ತಂಡದಲ್ಲೂ ಅವಕಾಶ ಪಡೆಯುವಂತೆ ಮಾಡಿತ್ತು.
ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ ಬೆನ್ನಲ್ಲೇ ಕೆಕೆಆರ್ 2022ರ ಮೆಗಾ ಹರಾಜಿನಲ್ಲಿ 8 ಕೋಟಿ ರೂ. ನೀಡಿ ರಿಟೈನ್ ಮಾಡಿಕೊಂಡಿತ್ತು. ಆದರೆ ಪ್ರಸ್ತುತ ಆವೃತ್ತಿಯಲ್ಲಿ ಅಯ್ಯರ್ ಸಂಪೂರ್ಣ ಲಯ ಕಳೆದುಕೊಂಡಿದ್ದಾರೆ. ಆಡಿರುವ 9 ಪಂದ್ಯಗಳಲ್ಲಿ ಅವರು ಒಂದು ಅರ್ಧಶತಕ ಸಹಿತ 132 ರನ್ಗಳಿಸಿದ್ದಾರೆ. ಹಾಗಾಗಿ ಮುಂದಿನ ಪಂದ್ಯಗಳು ಪ್ರಮುಖವಾಗಿರುವುದರಿಂದ ಟೀಮ್ ಮ್ಯಾನೇಜ್ಮೆಂಟ್ ಅವರನ್ನು ತಂಡದಿಂದ ಕೈಬಿಟ್ಟಿದೆ.