ಕೋಲ್ಕತ್ತಾ: ನಾಯಕತ್ವದ ಅಕಾಂಕ್ಷೆಯಿಂದ ಡೆಲ್ಲಿ ಕ್ಯಾಪಿಟಲ್ಸ್ ಬಿಟ್ಟು ಬಂದಿರುವ ಶ್ರೇಯಸ್ ಅಯ್ಯರ್ ಅವರನ್ನು ಮುಂಬರುವ ಐಪಿಎಲ್ ಮೆಗಾ ಹರಾಜಿನಲ್ಲಿ ಖರೀದಿಸುವುದಕ್ಕೆ ಹಾಲಿ ರನ್ನರ್ ಅಪ್ ಕೋಲ್ಕತ್ತಾ ನೈಟ್ ರೈಡರ್ಸ್ ಬಯಸಿದೆ ಮೂಲಗಳು ತಿಳಿಸಿವೆ.
2020ರಲ್ಲಿ ಶ್ರೇಯಸ್ ಡೆಲ್ಲಿ ಮುನ್ನಡೆಸಿ ತಂಡವನ್ನು ಫೈನಲ್ಗೆ ಕೊಂಡೊಯ್ದಿದ್ದರು. ಆದರೆ 2021ರ ಐಪಿಎಲ್ಗೂ ಮುನ್ನ ಗಾಯಗೊಂಡಿದ್ದರಿಂದ ವಿಕೆಟ್ ಕೀಪರ್ ರಿಷಭ್ ಪಂತ್ ಅವರನ್ನು ಡೆಲ್ಲಿ ತಂಡ ನಾಯಕನನ್ನಾಗಿ ನೇಮಿಸಿತ್ತು. ಶ್ರೇಯಸ್ ಮರಳಿದ ಮೇಲು ಪಂತ್ರನ್ನೇ ಫ್ರಾಂಚೈಸಿ ನಾಯಕನನ್ನಾಗಿ ಮುಂದುವರಿಸಿತ್ತು.
ಇತ್ತ ಕೆಕೆಆರ್ 2021ರಲ್ಲಿ ನಾಯಕನಾಗಿದ್ದ ಇಯಾನ್ ಮಾರ್ಗನ್ರನ್ನು ರಿಟೈನ್ ಮಾಡಿಕೊಂಡಿಲ್ಲ. ಫ್ರಾಂಚೈಸಿ ನೂತನ ನಾಯಕನಿಗಾಗಿ ಎದುರು ನೋಡುತ್ತಿದ್ದು, ಈಗಾಗಲೇ ತಂಡ ಮುನ್ನಡೆಸಿದ ಅನುಭವವಿರುವ ಶ್ರೇಯಸ್ ಅಯ್ಯರ್ ಅವರನ್ನು ನಾಯಕನ ಆಯ್ಕೆಗಾಗಿ ಖರಿದೀಸಲು ಬಯಸಿದೆ ಎಂದು ತಿಳಿದುಬಂದಿದೆ.
2020ರಲ್ಲಿ ಡೆಲ್ಲಿ ತಂಡದ ನಾಯಕನಾಗಿದ್ದ ಶ್ರೇಯಸ್ ತಂಡವನ್ನು ಫೈನಲ್ಗೆ ಕೊಂಡೊಯ್ಯುವುದರ ಜೊತೆಗೆ 519 ರನ್ಗಳಿಸಿ 4ನೇ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು. 27 ವರ್ಷ ಮುಂಬೈ ಬ್ಯಾಟರ್ ಐಪಿಎಲ್ನಲ್ಲಿ 87 ಪಂದ್ಯಗಳಿಂದ 2375 ರನ್ಗಳಿಸಿದ್ದಾರೆ. ಇದರಲ್ಲಿ 16 ಅರ್ಧಶತಕಗಳು ಸೇರಿವೆ.