ನವದೆಹಲಿ: ಇಂಗ್ಲೆಂಡ್‌ನ ಮಾಜಿ ನಾಯಕ ಕೆವಿನ್ ಪೀಟರ್ಸನ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ದೆಹಲಿಯಲ್ಲಿ ನಡೆದ ರೈಸಿನಾ ಡೈಲಾಗ್ ಕಾರ್ಯಕ್ರಮಕ್ಕೆ ಪೀಟರ್ಸನ್ ಅವರನ್ನು ಆಹ್ವಾನಿಸಲಾಗಿತ್ತು. ಈ ವೇಳೆ, ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿರುವ ಅವರು ತಮ್ಮ ಟ್ವಿಟರ್ನಲ್ಲಿ,' ನಿಮ್ಮ ಜನ್ಮದಿನದಂದು ಚಿರತೆಗಳನ್ನು ಕಾಡಿಗೆ ಬಿಡುವ ಮಹತ್ಕಾರ್ಯ ಮಾಡಿದ್ದೀರಿ ಈ ಬಗ್ಗೆ ಕೇಳಿ ನನಗೆ ತುಂಬಾ ಸಂತೋಷವಾಯಿತು. ನಿಮ್ಮ ಆ ನಗು ಮತ್ತು ಹಸ್ತಲಾಘವ ಆತ್ಮೀಯವಾಗಿತ್ತು. ನಾನು ನಿಮ್ಮನ್ನು ಮತ್ತೊಮ್ಮೆ ಭೇಟಿಯಾಗಲು ಇಚ್ಚಿಸುತ್ತೇನೆ' ಎಂದು ಮೋದಿ ಅವರಿಗೆ ಟ್ಯಾಗ್ ಮಾಡಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಮೊದಿ ಕಳೆದ ವರ್ಷ ತಮ್ಮ 72ನೇ ಜನ್ಮದಿನದ ಸಂದರ್ಭದಲ್ಲಿ ನಮೀಬಿಯಾದಿಂದ ತರಲಾದ ಚೀತಾಗಳನ್ನು ಮಧ್ಯ ಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಬಿಟ್ಟರು. ಏಳು ದಶಕಗಳ ಹಿಂದೆ ಭಾರತದಲ್ಲಿ ಚೀತಾಗಳು ಅಳಿವು ಹೊಂದಿದ್ದವು. ದೇಶದಲ್ಲಿ ಚೀತಾಗಳ ಸಂತತಿಯನ್ನು ಬೆಳೆಸುವ ಉದ್ದೇಶದಿಂದ ‘ಚೀತಾ ಯೋಜನೆ’ ಅಡಿ ವಿದೇಶದಿಂದ ತಂದು ಅರಣ್ಯದಲ್ಲಿ ಬಿಟ್ಟು ಸಾಕಲಾಗುತ್ತಿದೆ.
ಮೋದಿ ಅವರ ಜನ್ಮದಿನದಂದು 8 ಚೀತಾಗಳನ್ನು (ಐದು ಹೆಣ್ಣು ಮತ್ತು ಮೂರು ಗಂಡು) ನಮೀಬಿಯಾದಿಂದ ಗ್ವಾಲಿಯರ್‌ಗೆ ಬೋಯಿಂಗ್ ವಿಮಾನದಲ್ಲಿ ಕರೆತರಲಾಗಿತ್ತು. ನಂತರ 12 ಚಿರತೆಗಳನ್ನು ಅರಣ್ಯಗಳಿಗೆ ಬಿಡಲಾಯಿತು. ಇದರಿಂದ ಒಟ್ಟು ಕುನೊ ರಾಷ್ಟ್ರೀಯ ಉದ್ಯಾನದಕ್ಕೆ 20 ಚೀತಾಗಳನ್ನು ಬಿಡಲಾಗಿದೆ. ಯೋಜನೆಯ ಪ್ರಕಾರ ಇನ್ನಷ್ಟೂ ಚೀತಾಗಳನ್ನು ತರಿಸುವ ಬಗ್ಗೆ ಸರ್ಕಾರ ಚಿಂತಿಸಿದೆ.
ಮಾರ್ಚ್ 2ರಂದು ಭಾರತಕ್ಕೆ ಬಂದಿಳಿದ ಕೆವಿನ್ ಪೀಟರ್ಸನ್ ಹಿಂದಿಯಲ್ಲಿ ಈ ಬಗ್ಗೆ ಟ್ವೀಟ್ ಮಾಡಿದ್ದರು. ಅವರು' ಭಾರತದಲ್ಲಿರಲು ಯಾವಾಗಲೂ ಉತ್ಸುಕನಾಗಿದ್ದೇನೆ. ವಿಶ್ವದ ಅತ್ಯುತ್ತಮ ಆತಿಥ್ಯದೊಂದಿಗೆ ನಾನು ಪ್ರೀತಿಸುವ ದೇಶ. ವಿಶ್ವದ ನನ್ನ ನೆಚ್ಚಿನ ನಗರಗಳಲ್ಲಿ ಒಂದಾದ ದೆಹಲಿಯಲ್ಲಿ ಕೆಲವು ದಿನಗಳನ್ನು ಕಳೆಯುತ್ತಿದ್ದೇನೆ' ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.