ಹೈದರಾಬಾದ್ :ಪ್ರಸ್ತುತ ಭಾರದಲ್ಲಿ ರಣಜಿ ಟ್ರೋಫಿ ನಡೆಯುತ್ತಿದೆ. ಈ ರಣಜಿ ಟ್ರೋಫಿಯಲ್ಲಿ ಭಾರತ ಉದಯೋನ್ಮುಖ ಆಟಗಾರರು ತಮ್ಮ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಅದರಲ್ಲು ಭಾರತ ಅಂಡರ್-19 ವಿಶ್ವಕಪ್ ವಿಜೇತ ನಾಯಕ ಯಶ್ ಧುಲ್ ಮತ್ತು ಮುಂಬೈನ ಸರ್ಫರಾಜ್ ಖಾನ್, ಕರ್ನಾಟಕ ತಂಡದ ನಾಯಕ ಮನಿಷ್ ಪಾಂಡೆ ಹಾಗೂ ಕೃಷ್ಣಪ್ಪ ಗೌತಮ್ ಸೇರಿದತಂತೆ ಅನೇಕ ಯುವ ಪ್ರತಿಭೆಗಳು ಬೆಳಕಿಗೆ ಬರುತ್ತಿದ್ದಾರೆ.
ಈ ಯುವ ಪ್ರತಿಭೆಗಳ ಆಟವನ್ನು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೊಂಡಾಡಿದ್ದಾರೆ. ಮುಂದಿನ ದಿನಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಯುವ ಬ್ಯಾಟ್ಸ್‌ಮನ್‌ಗಳಿಗೆ ಸಲಹೆ ನೀಡಿದ್ದಾರೆ. ರಣಜಿ ಟ್ರೋಫಿಯಲ್ಲಿ ನಿಮಗೆ ಸಿಕ್ಕ ಅವಕಾಶವನ್ನು ರನ್ ಗಳಿಸಲು ಉಪಯೋಗಿಸಿ ಆಯ್ಕೆಯ ಬಗ್ಗೆ ಚಿಂತಿಸಬೇಡಿ ಎಂದು ಸಲಹೆ ನೀಡಿದ್ದಾರೆ.
"ನಾನು ಅವರಿಗೆ ಹೇಳುವುದೇನೆಂದರೆ, ನೀವು ರನ್ ಗಳಿಸುವುದರ ಬಗ್ಗೆ ಚಿಂತಿಸಿ, ಆಯ್ಕೆಯ ಬಗ್ಗೆಯಲ್ಲ. ರಣಜಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಕ್ಕೆ ಹನುಮ ವಿಹಾರಿ, ಶ್ರೇಯಸ್ ಅಯ್ಯರ್ ಮತ್ತು ಶುಭ್‌ಮನ್ ಗಿಲ್ ಈಗ ಟೆಸ್ಟ್ ತಂಡದ ಭಾಗವಾಗಿದ್ದಾರೆ. ಹಾಗೆಯೇ ಮುಂದೆ ಎಲ್ಲ ಹುಡುಗರಿಗೆ ಅವಕಾಶವಿದೆ" ಎಂದು ರೋಹಿತ್ ಹೇಳಿದರು.
"ಇಂತಹ ಬಹಳಷ್ಟು ವ್ಯಕ್ತಿಗಳನ್ನ ನಾನು ನೋಡಿದ್ದೇನೆ. ನಿಮಗೆ ಸಿಕ್ಕ ಅವಕಾಶವನ್ನ ಸದುಪಯೊಗ ಪಡೆದುಕೊಂಡು ರನ್ಗಳಿಸುವ ಮೂಲಕ ತಂಡಕ್ಕೆ ನಿಮ್ಮದೆ ಆದ ಕೊಡುಗೆ ನೀಡಿ. ಆಗ ನೀವು ಸುಲಭವಾಗಿ ಆಯ್ಕೆಗಾರರ ಗಮನ ಸೆಳೆಯಬಹುದು. ಒಂದು ವೇಳೆ ಏನಾದರು ಅವಕಾಶ ಸಿಕ್ಕರೆ ಹೆಚ್ಚು ಹೆಚ್ಚು ರನ್ ಗಳಿಸುವುದರ ಮೇಲೆ ಕೇಂದ್ರೀಕರಿಸಿ, ಆಗ ಆಯ್ಕೆ ಖಚಿತವಾಗುತ್ತದೆ ”ಎಂದು ಅವರು ಹೇಳಿದರು.
ಇದನ್ನೂ ಓದಿ : ಐಸಿಸಿ ಟಿ-20 ರ‍್ಯಾಂಕಿಂಗ್ ಭಾರಿ ಜಿಗಿತ ಕಂಡ ಸೂರ್ಯ-ವೆಂಕಟೇಶ್
ಇನ್ನೂ ಶ್ರೀಲಂಕಾ ವಿರುದ್ಧದ ಸರಣಿಯ ಬಗ್ಗೆ ಮಾತನಾಡಿದ ಅವರು, ಶ್ರೀಲಂಕಾ ವಿರುದ್ಧ ಎರಡು ಟೆಸ್ಟ್ ಪಂದ್ಯಗಳು ಮೊಹಾಲಿ ಮತ್ತು ಬೆಂಗಳೂರಿನಲ್ಲಿ ನಡೆಯಲಿದ್ದು, ಈ ಪಂದ್ಯಗಳಲ್ಲಿ ನಮ್ಮ ತಂಡ ಉತ್ತಮ ಪ್ರದರ್ಶನವನ್ನ ನೀಡಿಲಿದೆ ಎಂದು ಹೇಳಿದರು.
ಇನ್ನೂ ಸಂಜು ಸ್ಯಾಮ್ಸನ್‌ರನ್ನು ತಂಡದಿಂದ ಕೈಬಿಡಲಾಗಿದೆ. ಮುಂದೆ ಮ್ಯಾನೇಜ್‌ಮೆಂಟ್ ಅವರಿಗೆ ಆಡುವ XIನಲ್ಲಿ ಅವಕಾಶ ನೀಡುತ್ತದೆಯೇ ಎಂಬುದು ಈಗ ಕುತೂಹಲಕಾರಿ ಅಂಶವಾಗಿದೆ. ಇನ್ನೂ ಸಂಜು ಸ್ಯಾಮ್ಸನ್‌ರನ್ನ ಹಾಡಿ ಹೊಗಳಿರುವ ರೋಹಿತ್ ಶರ್ಮಾ, ಆತ ಅತ್ಯಂತ ಪ್ರತಿಭಾವಂತ ಬ್ಯಾಟರ್ ಎಂದು ಶ್ಲಾಘಿಸಿದರು.
"ಸ್ಯಾಮ್ಸನ್ ಬಗ್ಗೆ ಹೇಳುವುದಾದರೆ, ಆ ವ್ಯಕ್ತಿಗೆ ಟ್ಯಾಲೆಂಟ್ ಸಿಕ್ಕಾ ಪಟ್ಟೆಯಿದೆ. ಅದು ಎಲ್ಲರಿಗೂ ತಿಳಿದ ವಿಷಯ. ಅವನು ಐಪಿಎಲ್‌ನಲ್ಲಿ ಬ್ಯಾಟ್ ಮಾಡುವ ರೀತಿ ನೋಡಿದರೆ ತುಂಬಾ ಖುಷಿಯಾಗುತ್ತದೆ. ಆತ ಕೇವಲ ಒಂದು ಎರಡು ಇನ್ನಿಂಗ್ಸ್ಗಳಲ್ಲಿ ತಮ್ಮ ಸಾಮರ್ಥ್ಯ ತೋರಿದರೆ ಸಾಲದು, ಎಲ್ಲಾ ಪಂದ್ಯಗಳಲ್ಲು ತನ್ನ ಸಾಮರ್ಥ್ಯ ಕಾಯ್ದುಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.