ಬೆಂಗಳೂರು:ರಣಜಿ ಟ್ರೋಫಿಯ ಮೊದಲ ಎರಡು ಪಂದ್ಯಗಳಿಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ಅನುಭವಿ ಆರಂಭಿಕ ಆಟಗಾರ ಮಾಯಾಂಕ್ ಅಗರ್ವಾಲ್ ತಂಡದ ನಾಯಕರಾಗಿ ಮುಂದುವರೆದಿದ್ದು, ಯುವ ಬ್ಯಾಟ್ಸ್ಮನ್ ನಿಕಿನ್ ಜೋಸ್ ಅವರನ್ನು ತಂಡದ ಉಪನಾಯಕನಾಗಿ ಹೆಸರಿಸಲಾಗಿದೆ.
ಶುಭಾಂಗ್, ಶಶಿಕುಮಾರ್, ರೋಹಿತ್ ಕುಮಾರ್ಗೆ ಸ್ಥಾನ:ಬುಧವಾರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ, ರಣಜಿ ಟ್ರೋಫಿಯ ಮೊದಲ ಎರಡು ಪಂದ್ಯಗಳಿಗೆ 16 ಸದಸ್ಯರ ತಂಡ ಪ್ರಕಟಿಸಿದ್ದು, ಅನುಭವಿ ಆಲ್ ರೌಂಡರ್ ಕೆ. ಗೌತಮ್, ವಿಕೆಟ್ ಕೀಪರ್ ಬಿ. ಆರ್. ಶರತ್ ಮತ್ತು ಎಡಗೈ ಸ್ಪಿನ್ನರ್ ಜೆ. ಸುಚಿತ್ ಅವರನ್ನು ತಂಡದಿಂದ ಕೈಬಿಡಲಾಗಿದೆ.
ಬದಲಿಗೆ ಎಡಗೈ ಸ್ಪಿನ್ನರ್ ಶುಭಾಂಗ್ ಹೆಗಡೆ, ಆಫ್ಸ್ಪಿನ್ನರ್ ಕೆ. ಶಶಿಕುಮಾರ್ ಮತ್ತು ಎಡಗೈ ಸ್ಪಿನ್ನರ್ ಎ. ಸಿ. ರೋಹಿತ್ ಕುಮಾರ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ ಡಿ. ನಿಶ್ಚಲ್ ನಾಲ್ಕು ವರ್ಷಗಳ ಬಳಿಕ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚಿಗೆ ಮುಂಬೈ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆಕರ್ಷಕ ಶತಕ ಗಳಿಸಿದ್ದ ನಿಶ್ಚಲ್, ಆಯ್ಕೆಗಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜನವರಿ 5 ರಿಂದ ಆರಂಭವಾಗಲಿರುವ ಟೂರ್ನಿಯಲ್ಲಿ ಕರ್ನಾಟಕ ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಎದುರಿಸಲಿದೆ. ಜನವರಿ 12 ರಂದು ಆರಂಭವಾಗಲಿರುವ ದ್ವಿತೀಯ ಪಂದ್ಯದಲ್ಲಿ ಗುಜರಾತ್ ವಿರುದ್ಧ ಸೆಣಸಲಿದೆ.