ಲಂಡನ್:ಇಂಗ್ಲೆಂಡ್ ವಿರುದ್ಧ ಓವಲ್ನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಕರ್ನಾಟಕದ ವೇಗದ ಬೌಲರ್ ಪ್ರಸಿಧ್ ಕೃಷ್ಣ ಭಾರತ ತಂಡಕ್ಕೆ ಸೇರಿಕೊಂಡಿದ್ದಾರೆ ಎಂದು ಬಿಸಿಸಿಐ ಬುಧವಾರ ಖಚಿತಪಡಿಸಿದೆ.
ಗುರುವಾರದಿಂದ ಓವಲ್ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ 4ನೇ ಟೆಸ್ಟ್ ಪಂದ್ಯ ನಡೆಯಲಿದೆ. ಎರಡು ತಂಡಗಳು ತಲಾ ಒಂದು ಟೆಸ್ಟ್ ಪಂದ್ಯ ಗೆದ್ದು 1-1ರಲ್ಲಿ ಸರಣಿ ಸಮಬಲ ಸಾಧಿಸಿವೆ.
ಟೀಮ್ ಮ್ಯಾನೇಜ್ಮೆಂಟ್ ಮನವಿ ಮೇರೆಗೆ ಭಾರತದ ಆಯ್ಕೆ ಸಮಿತಿ ವೇಗದ ಬೌಲರ್ ಪ್ರಸಿಧ್ ಕೃಷ್ಣ ಅವರನ್ನು ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಹೇಳಿಕೆ ಬಿಡುಗಡೆ ಮಾಡಿದೆ.
ಪ್ರಸಿಧ್ ಹೆಚ್ಚುವರಿ ಬೌಲರ್ ಆಗಿ ಟೀಮ್ ಇಂಡಿಯಾ ಜೊತೆ ಇಂಗ್ಲೆಂಡ್ಗೆ ಪ್ರವಾಸ ಬೆಳೆಸಿದ್ದರು. ಇದೀಗ ನಾಲ್ಕನೇ ಟೆಸ್ಟ್ಗೆ ಪದಾರ್ಪಣೆ ಮಾಡುವ ಸಾಧ್ಯತೆಯಿದೆ. ಕೃಷ್ಣ ಮಾರ್ಚ್ 23, 2021ರಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಅವರು ಭಾರತದ ಪರ 3 ಏಕದಿನ ಪಂದ್ಯಗಳಿಂದ 6 ವಿಕೆಟ್ ಪಡೆದಿದ್ದಾರೆ. 9 ಪ್ರಥಮ ದರ್ಜೆ ಪಂದ್ಯಗಳಿಂದ 34 ವಿಕೆಟ್ ಪಡೆದಿದ್ದಾರೆ.