ನವದೆಹಲಿ:ಸದ್ಯದ ಕ್ರಿಕೆಟ್ನ ಟಾಪ್ 4 ಬ್ಯಾಟರ್ಗಳು ಎಂದರೆ ಅದು ಭಾರತದ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ಇಂಗ್ಲೆಂಡ್‌ನ ಜೋ ರೂಟ್ ಮತ್ತು ನ್ಯೂಜಿಲ್ಯಾಂಡ್ನ ಕೇನ್ ವಿಲಿಯಮ್ಸನ್. ಅದರಲ್ಲೂ ಕೇನ್ ವಿಶ್ವಕ್ರಿಕೆಟ್ಗ ಸವ್ಯಸಾಚಿ ಬ್ಯಾಟರ್ ಎಂದೇ ಗುರುತಿಸಿಕೊಂಡಿದ್ದಾರೆ. ಮೊದಲ ಟೆಸ್ಟ್ ವಿಶ್ವಕಪ್ ಗೆದ್ದ ಕಿವೀಸ್ ನಾಯಕ ಇಂದು (ಆಗಸ್ಟ್ 8) 33ನೇ ವಸಂತಕ್ಕೆ ಕಾಲಿಟ್ಟರು.
ಆಧುನಿಕ ಯುಗದ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರಾದ ಕೇನ್ ವಿಲಿಯಮ್ಸನ್ ಅವರು ನ್ಯೂಜಿಲ್ಯಾಂಡ್ ತಂಡದ ಮುಂಚೂಣಿ ನಾಯಕರಾಗಿದ್ದಾರೆ. ಉಳಿದ ತಂಡಗಳ ಸವಾಲುಗಳನ್ನು ಮೆಟ್ಟಿನಿಂತು ಕಿವೀಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
2010 ರಲ್ಲಿ ದೇಶದ ಪರವಾಗಿ ಪದಾರ್ಪಣೆ ಮಾಡಿದ ವಿಲಿಯಮ್ಸನ್ ಅವರು, ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಆಧುನಿಕ ಯುಗದ 'ಫ್ಯಾಬ್ ಫೋರ್' ಬ್ಯಾಟಿಂಗ್ ತಾರೆಯರಾದ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ಭಾರತದ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಮತ್ತು ಇಂಗ್ಲೆಂಡ್‌ನ ಜೋ ರೂಟ್ ಅವರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ.
ಕೇನ್ ಕ್ರಿಕೆಟ್ ಹಾದಿ..:ಕೇನ್ ಈವರೆಗೂ ನ್ಯೂಜಿಲ್ಯಾಂಡ್ ಪರವಾಗಿ 94 ಟೆಸ್ಟ್ ಪಂದ್ಯಗಳನ್ನಾಡಿದ್ದು, 54.89 ಸರಾಸರಿಯಲ್ಲಿ 8,124 ರನ್ ಗಳಿಸಿದ್ದಾರೆ. ಇದರಲ್ಲಿ 28 ಶತಕಗಳು ಮತ್ತು 33 ಅರ್ಧ ಶತಕಗಳಿವೆ. 251 ರ ಅತ್ಯುತ್ತಮ ಸ್ಕೋರ್ ಆಗಿದೆ. 161 ಏಕದಿನಗಳನ್ನಾಡಿದ್ದು, 47.83 ಸರಾಸರಿಯಲ್ಲಿ 6,554 ರನ್ ಗಳಿಸಿದ್ದಾರೆ. 13 ಶತಕಗಳು ಮತ್ತು 42 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ರಾಸ್ ಟೇಲರ್ (236 ಪಂದ್ಯಗಳಲ್ಲಿ 8.607 ರನ್) ಅಗ್ರಸ್ಥಾನಿಯಾಗಿದ್ದರೆ, ಕೇನ್ ಕಿವೀಸ್ ಪರ ಐದನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.