ಹೈದರಾಬಾದ್ (ತೆಲಂಗಾಣ): ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಪ್ರಮುಖ ಆಟಗಾರರಾದ ನಾಯಕ ಕೇನ್ ವಿಲಿಯಮ್ಸನ್, ಟಿಮ್ ಸೌಥಿ, ಲಾಕಿ ಫರ್ಗ್ಯೂಸನ್ ಮತ್ತು ಬ್ರೆಸ್ವೆಲ್ ಅವರಿಲ್ಲದೇ ಮೈದಾನಕ್ಕಿಳಿದಿತ್ತು. ಅಲ್ಲದೇ ಆ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿತ್ತು. ಬಲಿಷ್ಠ ಹಾಲಿ ಚಾಂಪಿಯನ್ ಇಂಗ್ಲೆಂಡ್ಗೆ ಸುಲಭವಾಗಿ ಮಣ್ಣು ಮುಕ್ಕಿಸಿದ ಕಿವೀಸ್ ದುರ್ಬಲ ನೆದರ್ಲ್ಯಾಂಡ್ ವಿರುದ್ಧವೂ ಪ್ರಮುಖ ಆಟಗಾರರನ್ನು ತೊರೆದು ಮೈದಾನಕ್ಕಿಳಿಯುವ ಚಿಂತನೆಯಲ್ಲಿದೆ. ಈ ಮೂಲಕ ಗಾಯಾಳುಗಳಿಗೆ ಇನ್ನಷ್ಟು ಚೇತರಿಕೆಗೆ ಸಮಯ ನೀಡುವ ಚಿಂತನೆಯಲ್ಲಿದೆ ತಂಡ.
2023ರ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವೇಳೆ ಕೇನ್ ವಿಲಿಯಮ್ಸ್ನ್ ಗಾಯಕ್ಕೆ ತುತ್ತಾಗಿದ್ದರು. ನಂತರ ವಿಶ್ವಕಪ್ ವೇಳೆಗೆ ಚೇತರಿಸಿಕೊಂಡ ಅವರು ತಂಡಕ್ಕೆ ಸೇರುಕೊಂಡಿದ್ದರು. ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ವಿಶ್ವಕಪ್ನ ಅಭ್ಯಾಸ ಪಂದ್ಯಗಳಲ್ಲಿ ವಿಲಿಯಮ್ಸನ್ ಆಡಿದ್ದರು. ಆ ಪಂದ್ಯಗಳಲ್ಲಿ ಕ್ರಮವಾಗಿ 54 ಮತ್ತು 37 ರನ್ ಗಳಿಸಿದ್ದರು. ಆದರೆ ಮತ್ತೆ ಅಭ್ಯಾಸದ ಸಂದರ್ಭದ ಗಾಯ ಉಲ್ಬಣಗೊಂಡಿದ್ದರಿಂದ ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಕಾಣಿಸಿಕೊಂಡಿರಲಿಲ್ಲ. ನಾಳೆ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲೂ ವಿಲಿಯಮ್ಸನ್ ಆಡುವುದಿಲ್ಲ ಎಂದು ಕೋಚ್ ಮಾಹಿತಿ ನೀಡಿದ್ದಾರೆ.
"ಕೇನ್ ತುಂಬಾ ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಮೈದಾನಕ್ಕೆ ಇಳಿಯಲು ಇನ್ನೂ ಸ್ವಲ್ಪ ಹೆಚ್ಚಿನ ತಯಾರಿಯ ಅಗತ್ಯ ಇದೆ. ಅವರ ದೇಹದ ಮೇಲೆ ಅವರಿಗೆ ಭರವಸೆ ಬರಬೇಕಿದೆ. ಹೀಗಾಗಿ ನಾಳಿನ ಪಂದ್ಯಕ್ಕೆ ಅವರು ತಂಡದಿಂದ ಹೊರಗಿರುತ್ತಾರೆ. ತಂಡದ ಮೂರನೇ ಪಂದ್ಯಕ್ಕೆ ಅವರು ಮರಳುವ ವಿಶ್ವಾಸ ಇದೆ. ನೆದರ್ಲ್ಯಾಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ಇಂದು ತರಬೇತಿಯ ಸೆಷನ್ ಮಾಡಲಾಗಿದೆ. ಇದರಲ್ಲಿ ಕೇನ್ ಬಿಟ್ಟು ಉಳಿದವರು ಭಾಗವಹಿಸಲಿದ್ದು, ಫಿಟ್ ಆದವರನ್ನು ನೆದರ್ಲ್ಯಾಂಡ್ ವಿರುದ್ಧ ಆಡಿಸಲಾಗುತ್ತದೆ" ಎಂದು ಮುಖ್ಯ ಕೋಚ್ ಸ್ಟೇಡ್ ತಿಳಿಸಿದ್ದಾರೆ.