ಮುಂಬೈ (ಮಹಾರಾಷ್ಟ್ರ): 2019ರ ವಿಶ್ವಕಪ್ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಸೆಮೀಸ್ನಲ್ಲಿ ಮುಖಾಮುಖಿ ಆಗಿತ್ತು. ಅಂದು ಟೀಮ್ ಇಂಡಿಯಾ 18 ರನ್ಗಳಿಂದ ಕಿವೀಸ್ ವಿರುದ್ಧ ಸೋಲು ಕಂಡಿತ್ತು. ನಾಲ್ಕು ವರ್ಷಗಳ ನಂತರ ಉಭಯ ತಂಡಗಳು ಅದೇ ಹಂತದಲ್ಲಿ ಮುಖಾಮಖಿ ಆಗುತ್ತಿದ್ದು, ಕುತೂಹಲ ಹೆಚ್ಚಾಗಿದೆ. ಪಂದ್ಯಕ್ಕೂ ಮುನ್ನಾದಿನ ಮಾತನಾಡಿದ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ "ಲೀಗ್ ವರೆಗೆ ಒಂದು ಲೆಕ್ಕಾಚಾರ, ಸೆಮೀಸ್ ಹಂತದಲ್ಲಿ ಎಲ್ಲ ಹೊಸತು" ಎಂದು ಹೇಳಿದ್ದಾರೆ.
"ಇದು ಕಠಿಣ ಸವಾಲಾಗಲಿದೆ. ಭಾರತ ಉತ್ತಮವಾಗಿ ಆಡುತ್ತಿರುವ ತಂಡವಾಗಿದೆ. ಆದರೆ, ಫೈನಲ್ ಸಮಯ ಬರುತ್ತದೆ ಎಂದು ನಮಗೆ ತಿಳಿದಿದೆ. ಹೀಗಾಗಿ ಎಲ್ಲವೂ ಮತ್ತೆ ಆರಂಭವಾಗುತ್ತದೆ ಹಾಗೇ ಪ್ರತಿ ಪಂದ್ಯವೂ ಆ ದಿನಕ್ಕೆ ಅನುಗುಣವಾಗಿರುತ್ತದೆ. ಇಲ್ಲಿ ಯಾರು ಯಾರನ್ನು ಬೇಕಾದರೂ ಮಣಿಸಬಹುದು. ಎರಡೂ ಕಡೆಯ ಗುಣಮಟ್ಟ ಮತ್ತು ಪರಿಸ್ಥಿತಿಗಳು ಬದಲಾಗಿರುತ್ತದೆ" ಎಂದು ಕೇನ್ ಹೇಳಿದ್ದಾರೆ.
ಗಾಯದಿಂದ ಮರಳಿ ಮತ್ತೆ ಗಾಯಕ್ಕೆ ತುತ್ತಾದ ವಿಲಿಯಮ್ಸನ್ ಭಾರತದ ವಿಶ್ವಕಪ್ ಪಯಣ ಸ್ಮರಣೀಯ ಎಂದು ಹೇಳಿದ್ದಾರೆ. "ಖಚಿತವಾಗಿ ಒಂದು ಆಸಕ್ತಿದಾಯಕ ಪ್ರಯಾಣ. ಗಾಯದಿಂದ ಮರಳಿ ಮತ್ತೆ ಹೆಬ್ಬೆರಳು ಮುರಿದುಕೊಂಡೆ, ಇದು ತಮಾಷೆ ಅಲ್ಲ. ಎಲ್ಲಾ ನೆನಪಿನಲ್ಲಿ ಉಳಿಯುವಂತಹದ್ದು. ಹೀಗಾಗಿ ತಂಡವಾಗಿ ಹಾಗೇ ವೈಯಕ್ತಿಕವಾಗಿಯೂ ವಿಶೇಷವಾಗಿದೆ. ವಿಶ್ವ ಮಟ್ಟದ ಟೂರ್ನಮೆಂಟ್ನಲ್ಲಿ ಭಾರತ ಉತ್ತಮವಾಗಿ ಆಯೋಜಿಸಿದೆ" ಎಂದರು.
ಭಾರತ ಸಮತೋಲನ ಕಳೆದುಕೊಂಡಿದೆ: ಟೀಮ್ ಇಂಡಿಯಾ ಹಾರ್ದಿಕ್ ಪಾಂಡ್ಯ ಹೊರಗುಳಿದ ನಂತರ ಸಮತೋಲನ ಕಳೆದುಕೊಂಡಂತೆ ಕಾಣುತ್ತದೆ ಎಂದು ಕೇನ್ ಹೇಳಿದ್ದಾರೆ."ಪ್ರತಿ ತಂಡವು ಸ್ವಲ್ಪ ವಿಭಿನ್ನ ಸಮತೋಲನವನ್ನು ಹೊಂದಿದ್ದು, ಭಾರತ ಹಾರ್ದಿಕ್ ಪಾಂಡ್ಯ ಮೇಲೆ ಅವಲಂಬಿತವಾಗಿತ್ತು, ಹೀಗಾಗಿ ಅವರ ಸಮತೋಲನವು ಸ್ವಲ್ಪಮಟ್ಟಿಗೆ ಬದಲಾಗಿದೆ. ಆದರೆ, ಅವರ ಫಲಿತಾಂಶದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ತಂಡ ಉತ್ತಮವಾಗಿ ಹೊಂದಿಕೊಂಡಿದೆ. ನಮ್ಮ ತಂಡವೂ ಲೀಗ್ ಹಂತದಲ್ಲಿ ಉತ್ತಮವಾಗಿ ಆಡಿದೆ" ಎಂದಿದ್ದಾರೆ.