ಸಿಲ್ಹೆಟ್:ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ದಾಖಲೆಗಳನ್ನು ಸರಿಗಟ್ಟುವುದು, ಮುರಿಯುವ ವರದಿಗಳನ್ನು ನಾವು ನೋಡಿದ್ದೇವೆ. ಆದರೆ, ಈಗ ಅದು ಬದಲಾಗಿದ್ದು, ಆ ಜಾಗಕ್ಕೆ ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ ಬಂದಿದ್ದಾರೆ. ಯಾವುದೇ ಕ್ರಿಕೆಟಿಗರು ದಾಖಲೆ ಮಾಡಿದರೆ, ಅಲ್ಲಿ ವಿರಾಟ್ ಹೆಸರು ಬರುತ್ತದೆ. ಸದ್ಯ ನಡೆಯುತ್ತಿರುವ ಬಾಂಗ್ಲಾದೇಶ- ನ್ಯೂಜಿಲ್ಯಾಂಡ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಕಿಂಗ್ ಶತಕಗಳನ್ನು ಕಿವೀಸ್ ಆಟಗಾರ ಸರಿಗಟ್ಟಿದ್ದಾರೆ.
ಸಿಲ್ಹೆಟ್ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಸಾಗಿರುವ ಬಾಂಗ್ಲಾ ಎದುರಿನ ಟೆಸ್ಟ್ನಲ್ಲಿ ಶತಕವನ್ನು (104) ಸಿಡಿಸಿದ ನ್ಯೂಜಿಲ್ಯಾಂಡ್ನ ಹಿರಿಯ ಬ್ಯಾಟರ್ ಕೇನ್ ವಿಲಿಯಮ್ಸನ್, ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಡಾನ್ ಬ್ರಾಡ್ಮನ್ ಅವರ ಟೆಸ್ಟ್ ಶತಕಗಳನ್ನು ಸರಿಗಟ್ಟಿದರು.
ವಿಲಿಯಮ್ಸನ್ ಅವರು 95 ನೇ ಟೆಸ್ಟ್ ಪಂದ್ಯದಲ್ಲಿ 29 ಟೆಸ್ಟ್ ಶತಕವನ್ನು ಗಳಿಸುವ ಮೂಲಕ ವಿರಾಟ್ಗಿಂತಲೂ ವೇಗವಾಗಿ ಈ ದಾಖಲೆ ಮಾಡಿದರು. ಕೊಹ್ಲಿ ವೆಸ್ಟ್ 111 ಇನ್ನಿಂಗ್ಸ್‌ಗಳಲ್ಲಿ 29 ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ. ಅಂದರೆ 26 ಇನಿಂಗ್ಸ್ ಅಂತರವಿದೆ. ಇದರ ಜೊತೆಗೆ ವಿಲಿಯಮ್ಸನ್, 52 ಟೆಸ್ಟ್ ಪಂದ್ಯಗಳಲ್ಲಿ 29 ಶತಕಗಳನ್ನು ಗಳಿಸಿದ ಡಾನ್ ಬ್ರಾಡ್ಮನ್ ಅವರ ಶತಕಗಳನ್ನೂ ಸರಿಗಟ್ಟಿದರು.
ಕಿವೀಸ್ ತಂಡದ ಮಾಜಿ ನಾಯಕ 205 ಎಸೆತಗಳಲ್ಲಿ 104 ರನ್ ಗಳಿಸುವ ಮೂಲಕ ತೈಜುಲ್ ಇಸ್ಲಾಮ್‌ಗೆ ವಿಕೆಟ್ ನೀಡಿದರು. ಇದಕ್ಕೂ ಮೊದಲು ಅವರು 189 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದರು. ಈ ವರ್ಷದಲ್ಲಿ ಕೇನ್ ಬಾರಿಸಿದ ನಾಲ್ಕನೇ ಟೆಸ್ಟ್ ಶತಕವಾಗಿದೆ. ಇದಕ್ಕೂ ಮೊದಲು ಇಂಗ್ಲೆಂಡ್ ಮತ್ತು ಶ್ರೀಲಂಕಾ ಎದುರಿನ ಟೆಸ್ಟ್ ಸರಣಿಯಲ್ಲಿ ಶತಕಗಳು ದಾಖಲಾಗಿದ್ದವು. 2010 ರಲ್ಲಿ ನ್ಯೂಜಿಲೆಂಡ್ ಪರ ಪದಾರ್ಪಣೆ ಮಾಡಿದ ವಿಲಿಯಮ್ಸನ್, ಟೆಸ್ಟ್ ಮಾದರಿಯಲ್ಲಿ ಅತಿ ಹೆಚ್ಚು ಶತಕಗಳೊಂದಿಗೆ, ಅತಿ ಹೆಚ್ಚು ರನ್ ಗಳಿಸಿದ ಕಿವೀಸ್ ಆಟಗಾರ ಎಂಬ ದಾಖಲೆ ಕೂಡ ಬರೆದರು.
ಕುಂಟುತ್ತಾ ಸಾಗಿದ ಕಿವೀಸ್:ಪಂದ್ಯದಲ್ಲಿ ಬಾಂಗ್ಲಾದೇಶ 310 ರನ್ ಗುರಿ ನೀಡಿದ್ದು, ಬೆನ್ನಟ್ಟಿರುವ ನ್ಯೂಜಿಲ್ಯಾಂಡ್ ಬ್ಯಾಟರ್ಗಳ ವೈಫಲ್ಯದಿಂದ ಕುಂಟುತ್ತಾ ಸಾಗಿದೆ. 2ನೇ ದಿನದಾಂತ್ಯಕ್ಕೆ ವಿಲಿಯಮ್ಸನ್ ಶತಕದ ಹೊರತಾಗಿಯೂ 8 ವಿಕೆಟ್ ನಷ್ಟಕ್ಕೆ 266 ರನ್ ಗಳಿಸಿದೆ. ಬಾಂಗ್ಲಾ ಗುರಿ ತಲುಪಲು ಇನ್ನೂ 44 ರನ್ ಬಾಕಿ ಇದೆ. ಬಾಂಗ್ಲಾದೇಶದ ಬೌಲರ್‌ಗಳ ಕರಾರುವಾಕ್ ದಾಳಿಯಿಂದಾಗಿ 2ನೇ ದಿನದ ಆರಂಭದಲ್ಲಿ 98 ರನ್‌ಗಳಿಗೆ ಅಗ್ರ ಮೂವರು ಕಿವೀಸ್ ಬ್ಯಾಟರ್‌ಗಳನ್ನು ಪೆವಿಲಿಯನ್ ಸೇರಿದರು.
ಬಳಿಕ ವಿಲಿಯಮ್ಸನ್ (104) ಶತಕ ಬಾರಿಸಿದರೆ, ಡ್ಯಾರಿಲ್ ಮಿಚೆಲ್ (41), ಗ್ಲೆನ್ ಫಿಲಿಪ್ಸ್ (42) ರನ್ ಗಳಿಸಿದರು. ಬಾಂಗ್ಲಾ ಪರವಾಗಿ ತೈಜುಲ್ ಇಸ್ಲಾಂ 4 ವಿಕೆಟ್ ಕಬಳಿಸಿ ಪ್ರಭಾವಿಯಾದರು. ಉಳಿದ ಬೌಲರ್ಗಳು ತಲಾ 1 ವಿಕೆಟ್ ಗಳಿಸಿದರು. ಇನ್ನೂ 3 ದಿನ ಆಟ ಬಾಕಿ ಇದೆ.
ಇದನ್ನೂ ಓದಿ:ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಮುಂದುವರಿಕೆ: ಬಿಸಿಸಿಐ ಘೋಷಣೆ