ಬರ್ಮಿಂಗ್‌ಹ್ಯಾಮ್: ಲಯದ ಸಮಸ್ಯೆ ಎದುರಿಸುತ್ತಿರುವ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಜಾನಿ ಬೈರ್ಸ್ಟೋವ್ರನ್ನು ಕೆಣಕಿ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದ್ದಾರೆ. ಭಾರತದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿ ಅಣಕಿಸಿದರೆ, ಇಂಗ್ಲೆಂಡ್ನ ಗ್ರೇಮ್ ಸ್ವಾನ್ ವಿರಾಟ್ ಔಟಾದ ರೀತಿಗೆ ವ್ಯಂಗ್ಯವಾಡಿದ್ದಾರೆ. ಪಂದ್ಯದಲ್ಲಿ ಕೊಹ್ಲಿ 2 ಇನ್ನಿಂಗ್ಸ್‌ಗಳಲ್ಲಿ ಕೇವಲ 31 ರನ್ ಮಾತ್ರ ಗಳಿಸಿದ್ದಾರೆ.
ಏನಾಯ್ತು?ಪಂದ್ಯದ ಮೂರನೇ ದಿನದಾಟದಲ್ಲಿ ಉತ್ತಮವಾಗಿ ಆಡುತ್ತಿದ್ದ ಇಂಗ್ಲೆಂಡ್ನ ಜಾನಿ ಬೈರ್ಸ್ಟೋವ್ರನ್ನು ವಿರಾಟ್ ಕೊಹ್ಲಿ ಕೆಣಕಿದರು. ಈ ವೇಳೆ ಬೈರ್ಸ್ಟೋವ್ ಪರಿಸ್ಥಿತಿ ತಣ್ಣಗಾಗಿಸಲು ಯತ್ನಿಸಿದರೂ ಬಿಡದ ವಿರಾಟ್ ಬ್ಯಾಟಿಂಗ್ ಮೇಲೆ ಗಮನ ನೀಡುವಂತೆ ಸನ್ನೆ ಮಾಡಿ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಅಂಪೈರ್ಗಳು ಮಧ್ಯಪ್ರವೇಶಿಸಿ ಆಟಗಾರರನ್ನು ಸುಮ್ಮನಿರುವಂತೆ ಕೋರಿಕೊಂಡರು. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ..
ನಂತರ ಪಂದ್ಯದಲ್ಲಿ ಅದ್ಭುತವಾಗಿ ಬ್ಯಾಟ್ ಬೀಸಿದ ಜಾನಿ ಬೈರ್ಸ್ಟೋವ್ ಶತಕ ಸಾಧನೆ ಮಾಡಿದರು. ಬಳಿಕ ಮಹಮದ್ ಶಮಿ ಎಸೆತದಲ್ಲಿ ಸ್ಲಿಪ್ನಲ್ಲಿದ್ದ ವಿರಾಟ್ ಕೊಹ್ಲಿಗೆ ಕ್ಯಾಚಿತ್ತು ಔಟಾದರು. ಆಗಲೂ ಬಿಡದ ವಿರಾಟ್ ಜಾನಿ ಕಡೆಗೆ ನೋಡುತ್ತಾ ಕೈಯಿಂದ ಚುಂಬಿಸಿ ಕಿಚಾಯಿಸಿದರು.
ಟ್ರೋಲ್ ಆದ ವಿರಾಟ್:ವಿರಾಟ್ ಕೊಹ್ಲಿಯ ಈ ನಡೆಯನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗಿದೆ. ಸ್ವತಃ ಬ್ಯಾಟ್ ಬೀಸಲು ಪರದಾಡುತ್ತಿರುವ ವಿರಾಟ್ ಇನ್ನೊಬ್ಬರ ಬ್ಯಾಟಿಂಗ್ ಕೆಣಕುತ್ತಿದ್ದಾರೆ ಎಂದು ಟೀಕಿಸಲಾಗಿದೆ.
ಕೆಣಕಿದ ಸೆಹ್ವಾಗ್:ವಿರಾಟ್ ಕೊಹ್ಲಿಯ ಸ್ಲೆಡ್ಜಿಂಗ್ಗೆ ಟಾಂಗ್ ಕೊಟ್ಟಿರುವ ಭಾರತದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್, ಚೇತೇಶ್ವರ್ ಪೂಜಾರಾ ರೀತಿ ಆಡುತ್ತಿದ್ದ ಜಾನಿ ಬೈರ್ಸ್ಟೋವ್ರನ್ನು ಕೆಣಕಿದ ವಿರಾಟ್ ರಿಷಬ್ ಪಂತ್ನನ್ನಾಗಿ ಮಾಡಿ ಕೈ ಸುಟ್ಟುಕೊಂಡರು ಎಂದು ತಮ್ಮ ಶೈಲಿಯಲ್ಲೇ ಖಾರವಾಗಿ ಟ್ವೀಟಿಸಿದ್ದಾರೆ.
ಗ್ರೇಮ್ ಸ್ವಾನ್ ವ್ಯಂಗ್ಯ:ಎರಡನೇ ಇನಿಂಗ್ಸ್ನಲ್ಲಿ ವಿರಾಟ್ ಕೊಹ್ಲಿ ಔಟಾಗಿದ್ದನ್ನು ವ್ಯಂಗ್ಯವಾಡಿರುವ ಇಂಗ್ಲೆಂಡ್ ಮಾಜಿ ಆಟಗಾರ ಗ್ರೇಮ್ ಸ್ವಾನ್, ಬೆನ್ ಸ್ಟ್ರೋಕ್ಸ್ ಬೌಲಿಂಗ್ ಎದುರಿಸಲು ಯಾವುದೇ ದಿಗ್ಗಜ ಬ್ಯಾಟರ್ಗೂ ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ವಿರಾಟ್ ಅವರನ್ನು ಟೀಕಿಸಿದ್ದಾರೆ. 20 ರನ್ ಗಳಿಸಿ ಆಡುತ್ತಿದ್ದ ಕೊಹ್ಲಿ, ಬೆನ್ ಸ್ಟೋಕ್ಸ್ ಎಸೆತದಲ್ಲಿ ಸ್ಲಿಪ್ನಲ್ಲಿದ್ದ ಜೋ ರೂಟ್ಗೆ ಕ್ಯಾಚಿತ್ತು ನಿರ್ಗಮಿಸಿದ್ದರು.
'ನಮ್ಮಿಬ್ಬರ ಮಧ್ಯೆ ಏನೂ ಇಲ್ಲ':ಪಂದ್ಯದ ಬಳಿಕ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಬೈರ್ಸ್ಟೋವ್, ವಿರಾಟ್ ಮತ್ತು ನನ್ನ ಮಧ್ಯೆ ಏನೂ ನಡೆದಿಲ್ಲ. ನಾನು ಆತನನ್ನು ಊಟಕ್ಕೆ ಕರೆಯಲು ಮರೆತಿದ್ದಕ್ಕೆ ಕೋಪಗೊಂಡರು ಎಂದು ತಮಾಷೆಯಾಗಿ ಹೇಳಿದರು. ಆಟದಲ್ಲಿ ಇವೆಲ್ಲಾ ಸಹಜ. ಇಬ್ಬರು ಪರಸ್ಪರ ವಿರುದ್ಧವಾಗಿ ಆಡುವಾಗ ಇದೆಲ್ಲಾ ನಡೆಯುತ್ತವೆ. ಅಲ್ಲಿ ಏನೂ ನಡೆದಿಲ್ಲ ಎಂದು ಸಾಗಹಾಕಿದರು.
ಭಾರತ ಬಿಗಿ ಹಿಡಿತ:ಪಂದ್ಯದಲ್ಲಿ ಭಾರತ ಬಿಗಿ ಹಿಡಿತ ಸಾಧಿಸಿದೆ. ಮೊದಲ ಇನಿಂಗ್ಸ್ನಲ್ಲಿ 416 ಗಳಿಸಿದ ಭಾರತ, ಇಂಗ್ಲೆಂಡ್ ತಂಡವನ್ನು 284 ರನ್ಗಳಿಗೆ ಔಟ್ ಮಾಡಿ 132 ರನ್ಗಳ ಮುನ್ನಡೆ ಪಡೆದಿತ್ತು. ಬಳಿಕ 2ನೇ ಇನಿಂಗ್ಸ್ ಆರಂಭಿಸಿರುವ ಭಾರತ 3 ವಿಕೆಟ್ ಕಳೆದುಕೊಂಡು 125 ರನ್ ಗಳಿಸಿದೆ. ಒಟ್ಟಾರೆ 257 ರನ್ಗಳ ಲೀಡ್ ಪಡೆದಿದೆ. ಇನ್ನೂ 2 ದಿನಗಳ ಆಟ ಬಾಕಿ ಉಳಿದಿದೆ. ಬೃಹತ್ ಮೊತ್ತ ಗಳಿಸಿ ಪಂದ್ಯ ಗೆಲ್ಲುವ ಮೂಲಕ ಸರಣಿ ಜಯಿಸುವ ಮಹತ್ವದ ಗುರಿ ಭಾರತದ್ದು.
ಇದನ್ನೂ ಓದಿ:ಇಂಗ್ಲೆಂಡ್ 284ರನ್ಗೆ ಆಲೌಟ್: ಭಾರತಕ್ಕೆ ಎರಡನೇ ಇನ್ನಿಂಗ್ಸ್ನಲ್ಲಿ ಆರಂಭಿಕ ಆಘಾತ