ಲಂಡನ್(ಇಂಗ್ಲೆಂಡ್) :ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೋಫ್ರಾ ಆರ್ಚರ್ ತಮ್ಮ ಬಲ ಮೊಣಕೈಗೆ ಎರಡನೇ ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ದೃಢಪಡಿಸಿದೆ.
ಜೋಫ್ರಾ ಆರ್ಚರ್ ಅವರು ಮೊಣಕೈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರು ಕ್ರಿಕೆಟ್‌ಗೆ ಯಾವಾಗ ಮರಳುತ್ತಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ನಿರ್ಧಾರ ಮಾಡಲಾಗುತ್ತದೆ. ಆದರೆ ಚಳಿಗಾಲದ ಯಾವುದೇ ಸರಣಿಗಳಲ್ಲಿ ಜೋಫ್ರಾ ಲಭ್ಯವಿರುವುದಿಲ್ಲ ಎಂದು ಇಸಿಬಿ ಅಧಿಕೃತ ಹೇಳಿಕೆ ನೀಡಿದೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ಭಾರತ ಟೆಸ್ಟ್ ಸರಣಿ, ಐಸಿಸಿ T20 ವಿಶ್ವಕಪ್ ಮತ್ತು ಆ್ಯಶಸ್‌ನಿಂದ ಆರ್ಚರ್ ಹೊರಗುಳಿದಿದ್ದರು. ಈ ಮೊದಲು ಮೇ 2020ರಲ್ಲಿ ಮೊಣಕೈ ಸಮಸ್ಯೆಗಾಗಿ ಆಪರೇಷನ್ ಮಾಡಲಾಗಿದ್ದು, ಅದಾದ ಕೆಲವು ದಿನಗಳ ನಂತರ ಜುಲೈನಲ್ಲಿ ಕ್ರಿಕೆಟ್ ತಂಡಕ್ಕೆ ಮರಳಿದ್ದರು. ಈಗ ಮತ್ತೊಮ್ಮೆ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ.
ಹೀಗಾಗಿ ಇಂಗ್ಲೆಂಡ್ ಮುಂದಿನ ವರ್ಷ ಜನವರಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ ಮತ್ತು ಜೋಫ್ರಾ ಆರ್ಚರ್ ಈ ಪಂದ್ಯಗಳಲ್ಲಿ ಇರುವುದಿಲ್ಲ. ಈಗ ಸದ್ಯಕ್ಕೆ ಆ್ಯಶಸ್ ಸರಣಿ ನಡೆಯುತ್ತಿದ್ದು, ಅಡಿಲೇಡ್ ಓವಲ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಗೆದ್ದಿರುವ ಆಸ್ಟ್ರೇಲಿಯಾ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಮೂರನೇ ಟೆಸ್ಟ್ ಡಿಸೆಂಬರ್ 26 ರಂದು ಆರಂಭವಾಗಲಿದೆ.
ಇದನ್ನೂ ಓದಿ:ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಜಪಾನ್ ವಿರುದ್ಧ ಸೋತು ಹೊರಬಿದ್ದ ಭಾರತ ಹಾಕಿ ತಂಡ