ಲಂಡನ್ :ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸೋಲುಂಡ ಬೆನ್ನಲ್ಲೇ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವಕ್ಕೆ ಜೋ ರೂಟ್ ರಾಜೀನಾಮೆ ನೀಡಿದ್ದಾರೆ. ಕಳೆದ ಐದು ವರ್ಷಗಳಿಂದ ರೂಟ್ ಇಂಗ್ಲೆಂಡ್ ಟೆಸ್ಟ್ ತಂಡದ ಮುಂದಾಳತ್ವ ವಹಿಸಿದ್ದರು. ಇತ್ತೀಚೆಗೆ ಕೆರಿಬಿಯನ್ ಪ್ರವಾಸ್ ಕೈಗೊಂಡಿದ್ದ ರೂಟ್ ಬಳಗ, ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0ದಿಂದ ಮುಖಭಂಗ ಅನುಭವಿಸಿತ್ತು. ಅಲ್ಲದೆ, ಇದಕ್ಕೂ ಮುನ್ನ ಆಸ್ಟ್ರೇಲಿಯಾದಲ್ಲಿ ನಡೆದ ಆ್ಯಶಷ್ ಸರಣಿಯಲ್ಲೂ ಕಳಪೆ ಪ್ರದರ್ಶನ ತೋರಿದ್ದ ಆಂಗ್ಲರು 4-0 ಅಂತರದಲ್ಲಿ ಸೋಲುಂಡಿದ್ದರು.
ರೂಟ್ 64 ಟೆಸ್ಟ್‌ಗಳಲ್ಲಿ ತಂಡವನ್ನು ಮುನ್ನಡೆಸಿದ್ದು, ಅದರಲ್ಲಿ 27 ಪಂದ್ಯಗಳಲ್ಲಿ ಗೆಲುವು ಕಂಡಿದ್ದಾರೆ. ಇತ್ತೀಚೆಗೆ ಆಡಿದ ಕೊನೆಯ 17 ಪಂದ್ಯಗಳಲ್ಲಿ 11 ಸೋಲುಂಡಿರುವ ಇಂಗ್ಲೆಂಡ್ ಒಂದು ಪಂದ್ಯ ಮಾತ್ರ ಗೆದ್ದಿದೆ. ಭಾರತ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಸೋಲುಗಳಿಂದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟಿಯಲ್ಲಿ ಶೋಚನೀಯ ಸ್ಥಿತಿಯಲ್ಲಿದೆ.
ಕೆರಿಬಿಯನ್ ಪ್ರವಾಸದಿಂದ ಹಿಂದಿರುಗಿದ ಬಳಿಕ ಸಿಕ್ಕ ಸಮಯದಲ್ಲಿ ನಾನು ಇಂಗ್ಲೆಂಡ್ ಟೆಸ್ಟ್ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದೆ. ಇದು ನನ್ನ ವೃತ್ತಿಜೀವನದ ಅತ್ಯಂತ ಸವಾಲಿನ ನಿರ್ಧಾರವಾಗಿದೆ. ಆದರೆ, ಇದನ್ನು ನನ್ನ ಕುಟುಂಬ ಮತ್ತು ನನಗೆ ಹತ್ತಿರದವರೊಂದಿಗೆ ಚರ್ಚೆ ಕೈಗೊಂಡಿದ್ದು, ಈ ನಿರ್ಧಾರಕ್ಕೆ ಸೂಕ್ತ ಸಮಯ ಎಂಬುದು ನನಗೆ ತಿಳಿದಿದೆ. ದೇಶದ ತಂಡದ ನಾಯಕತ್ವ ವಹಿಸಿದ್ದಕ್ಕೆ ಅಪಾರ ಹೆಮ್ಮೆ ಇದೆ ಎಂದು ರೂಟ್ ಹೇಳಿದ್ಧಾರೆ.