ಲಾರ್ಡ್ಸ್, ಲಂಡನ್ :ಮಾಜಿ ನಾಯಕ ಜೋ ರೂಟ್ ಅಜೇಯ ಶತಕ ಹಾಗೂ ನಾಯಕ ಬೆನ್ ಸ್ಟೋಕ್ಸ್(54) ಅರ್ಧಶತಕಗಳ ನೆರವಿನಿಂದ ನ್ಯೂಜಿಲ್ಯಾಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 5 ವಿಕೆಟ್ಗಳ ಜಯ ದಾಖಲಿಸಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಶುಭಾರಂಭ ಮಾಡಿರುವ ಆಂಗ್ಲರು 1-0 ಮುನ್ನಡೆ ಸಾಧಿಸಿದ್ದು, ಮೂರು ದಿನಗಳಲ್ಲೇ ಪಂದ್ಯ ಅಂತ್ಯಗೊಂಡಿದೆ.
ಎರಡನೇ ಇನ್ನಿಂಗ್ಸ್ನಲ್ಲಿ 277 ರನ್ಗಳ ಗೆಲುವಿನ ಗುರಿ ಹೊಂದಿದ್ದ ಇಂಗ್ಲೆಂಡ್ ಆರಂಭದಲ್ಲೇ ಆಘಾತ ಅನುಭವಿಸಿತು. 69 ರನ್ ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡಿತ್ತು. ಅಲೆಕ್ಸ್ ಲೀಸ್ (20), ಝಾಕ್ ಕ್ರಾಲಿ (9), ಒಲ್ಲಿ ಪೋಪ್ (10) ಹಾಗೂ ಜಾನಿ ಬೈರ್ಸ್ಟೋ (16) ಪೆವಿಲಿಯನ್ ಸೇರಿದ್ದರು. ಈ ವೇಳೆ ಒಂದಾದ ರೂಟ್ ಹಾಗೂ ಸ್ಟೋಕ್ಸ್ 90 ರನ್ ಸೇರಿಸಿ ತಂಡದ ಮೊತ್ತಕ್ಕೆ ಚೇತರಿಕೆ ನೀಡಿದರು.
54 ರನ್ ಗಳಿಸಿದ್ದ ಸ್ಟೋಕ್ಸ್ ಔಟಾದ ಬಳಿಕ ಜವಾಬ್ದಾರಿಯುತ ಬ್ಯಾಟಿಂಗ್ ಮುಂದುವರೆಸಿದ ರೂಟ್ (115) 26ನೇ ಶತಕ ದಾಖಲಿಸಿದರಲ್ಲದೆ, ತಂಡವನ್ನು ಗೆಲುವಿನ ದಡ ಸೇರಿಸಿದರು. ಬೆನ್ ಫೋಕ್ಸ್ ಅಜೇಯ 32 ಬಾರಿಸಿ ಗೆಲುವಿನಲ್ಲಿ ರೂಟ್ಗೆ ಸಾಥ್ ನೀಡಿದರು. ಕಿವೀಸ್ ಪರ ವೇಗಿ ಕೈಲ್ ಜೆಮಿಷನ್ 4 ವಿಕೆಟ್ ಕಬಳಿಸಿ ಮಿಂಚಿದರು.
ಇದಕ್ಕೂ ಮುನ್ನ ಪಂದ್ಯದ ಮೊದಲ ಇನ್ನಿಂಗ್ಸ್ಗಳಲ್ಲಿ ನ್ಯೂಜಿಲ್ಯಾಂಡ್ 132 ಹಾಗೂ ಇಂಗ್ಲೆಂಡ್ 141 ರನ್ಗಳಿಗೆ ಆಲೌಟ್ ಆಗಿದ್ದವು. ಬಳಿಕ ನ್ಯೂಜಿಲೆಂಡ್ ಎರಡನೇ ಇನ್ನಿಂಗ್ಸ್ನಲ್ಲೂ ಕುಸಿತದ ಹಾದಿ(56ಕ್ಕೆ 4 ವಿಕೆಟ್) ಹಿಡಿದರೂ ಕೂಡ, ಡೆರ್ಲ್ ಮಿಚೆಲ್ ಶತಕ (108) ಹಾಗೂ ಟಾಮ್ ಬ್ಲಂಡಲ್ (96) ಅರ್ಧಶಕದಿಂದ 285 ರನ್ ಪೇರಿಸಿತ್ತು.
ರೂಟ್ ದಾಖಲೆ :ಕಳೆದ ಏಪ್ರಿಲ್‌ನಲ್ಲಿ ಇಂಗ್ಲೆಂಡ್ ನಾಯಕ ಸ್ಥಾನದಿಂದ ಕೆಳಗಿಳಿದಿರುವ ಜೋ ರೂಟ್ ಟೆಸ್ಟ್ ಕ್ರಿಕೆಟ್ನಲ್ಲಿ 10,000 ರನ್ ಗಳಿಸಿದ ಎರಡನೇ ಇಂಗ್ಲಿಷ್ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾದರು. ಮಾಜಿ ನಾಯಕ ಅಲೆಸ್ಟರ್ ಕುಕ್ (12,472) ಇವರಿಗಿಂತ ಮೊದಲು ಈ ಮೈಲುಗಲ್ಲು ತಲುಪಿದ ಮೊದಲ ಇಂಗ್ಲೆಂಡ್ ಆಟಗಾರನಾಗಿದ್ದಾರೆ.