ನವದೆಹಲಿ:ಭಾರತ ಮಹಿಳಾ ಕ್ರಿಕೆಟ್ ತಂಡದ ಅನುಭವಿ ವೇಗಿ ಜೂಲನ್ ಗೋಸ್ವಾಮಿ ಅವರು, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವುದು ಖಚಿತವಾಗಿದೆ. ಸೆಪ್ಟೆಂಬರ್ 24 ರಂದು ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ನಲ್ಲಿ ನಡೆಯುವ ಪಂದ್ಯ ಅವರ ವೃತ್ತಿ ಜೀವನದ ಕೊನೆಯ ಪಂದ್ಯವಾಗಲಿದೆ ಎಂದು ಹೇಳಲಾಗಿದೆ.
39 ವರ್ಷದ ಜೂಲನ್ ಗೋಸ್ವಾಮಿ ಅವರು ಭಾರತದ ಪರ ದಶಕಗಳಿಂದ ತಂಡದ ಅವಿಭಾಜ್ಯ ಅಂಗವಾಗಿದ್ದರು. ವೇಗದ ಬೌಲಿಂಗ್ ನೇತೃತ್ವ ವಹಿಸಿದ್ದ ಅವರು ಈವರೆಗೂ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 352 ವಿಕೆಟ್ ಪಡೆದು ಅತಿ ಹೆಚ್ಚು ವಿಕೆಟ್ ಟೇಕರ್ ಆಗಿದ್ದಾರೆ.
ಬಿಸಿಸಿಐ ಶುಕ್ರವಾರವಷ್ಟೇ ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಪ್ರಕಟಿಸಿದೆ. ಫಿಟ್ನೆಸ್ ಸಮಸ್ಯೆಯಿಂದಾಗಿ ತಂಡದಿಂದ ದೂರವುಳಿದಿದ್ದ ಗೋಸ್ವಾಮಿ ಅವರಿಗೆ ಮೂರು ಪಂದ್ಯಗಳ ಏಕದಿನ ಸರಣಿಗೆ ಸ್ಥಾನ ನೀಡಲಾಗಿದೆ. ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯ ಸೆಪ್ಟೆಂಬರ್ 24ರಂದು ಕ್ರಿಕೆಟ್ ಕಾಶಿಯಾದ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದ್ದು, ಇದು ಭಾರತದ ವೇಗದ ಬೌಲರ್ ಮಹಿಳಾ ಕ್ರಿಕೆಟರ್ಗೆ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಲಿದೆ.
ಜೂಲನ್ ಗೋಸ್ವಾಮಿ ಅವರು 2002 ರಲ್ಲಿ ತಮ್ಮ 19ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಭಾರತ ಪರ ಜೂಲನ್ ಗೋಸ್ವಾಮಿ 12 ಟೆಸ್ಟ್, 201 ಏಕದಿನ ಹಾಗೂ 68 ಟಿ-20 ಪಂದ್ಯಗಳನ್ನಾಡಿದ್ದು, 352 ವಿಕೆಟ್ಗಳನ್ನು ಕಬಳಿಸಿದ್ದಾರೆ. ಒಟ್ಟು 6 ಏಕದಿನ ವಿಶ್ವಕಪ್ ಪ್ರತಿನಿಧಿಸಿದ್ದಾರೆ. ಏಕದಿನ ಕ್ರಿಕೆಟ್‌ವೊಂದರಲ್ಲೇ 252 ವಿಕೆಟ್ ಕಬಳಿಸುವ ಮೂಲಕ ಅತಿಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಆಗಿದ್ದಾರೆ.
ಓದಿ:ಮಾಜಿ ಒಲಿಂಪಿಯನ್ ಫುಟ್ಬಾಲ್ ಆಟಗಾರ ಸಮರ್ ಬ್ಯಾನರ್ಜಿ ನಿಧನ