ಲಾರ್ಡ್ಸ್ , ಇಂಗ್ಲೆಂಡ್:ಭಾರತ ಮತ್ತು ವಿಶ್ವ ಮಹಿಳಾ ಕ್ರಿಕೆಟ್ನ ಅಚ್ಚಳಿಯದ ಹೆಸರೆಂದರೆ ಅದು ಜೂಲನ್ ಗೋಸ್ವಾಮಿ. ಅತಿ ಹೆಚ್ಚು ವಿಕೆಟ್ ಪಡೆದ ವಿಶ್ವದ ಮೊದಲ, ಅತಿಹೆಚ್ಚು ಏಕದಿನ ಪಂದ್ಯವಾಡಿದ ವಿಶ್ವದ 2ನೇ ಮಹಿಳಾ ಕ್ರಿಕೆಟರ್ ಆಗಿದ್ದಾರೆ. ಇಂತಹ ಮೇರು ಆಟಗಾರ್ತಿಗೆ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯ ವೃತ್ತಿಜೀವನದ ಕೊನೆಯ ಪಂದ್ಯವಾಗಿದೆ.
ಲಾರ್ಡ್ಸ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಜೂಲನ್ ಗೋಸ್ವಾಮಿ ಅವರು 9ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಮೈದಾನಕ್ಕೆ ಆಗಮಿಸಿದಾಗ ಇಂಗ್ಲೆಂಡ್ ವನಿತೆಯರು ಇಕ್ಕೆಲಗಳಲ್ಲಿ ಸಾಲಾಗಿ ನಿಂತು (ಗಾರ್ಡ್ ಆಫ್ ಹಾನರ್) ಹಿರಿಯ ಆಟಗಾರ್ತಿಗೆ ಗೌರವ ಸಲ್ಲಿಸಿದರು. ಎಲ್ಲರಿಗೂ ಧನ್ಯವಾದ ಗೋಸ್ವಾಮಿ ಅವರು ಆಟಗಾರರ ಮಧ್ಯೆ ನಡೆದು ಹೋದರು. ಈ ವೇಳೆ ಇಡೀ ಕ್ರೀಡಾಂಗಣದಲ್ಲಿ ಕರತಾಡನದ್ದೇ ಸದ್ದು.
ನಾಯಕಿ ಜೊತೆ ಟಾಸ್ ಮಾಡಿದ ಜೂಲನ್:ಇನ್ನು ಪಂದ್ಯ ಆರಂಭಕ್ಕೂ ಮೊದಲು ಟಾಸ್ ಮಾಡಲು ಇಂಗ್ಲೆಂಡ್ ಮತ್ತು ಭಾರತ ತಂಡದ ನಾಯಕಿಯರು ಮೈದಾನಕ್ಕೆ ಆಗಮಿಸಿದಾಗ, ಹರ್ಮನ್ಪ್ರೀತ್ ಕೌರ್ ಅವರ ಕೋರಿಕೆ ಮೇರೆಗೆ ಅಂತಿಮ ಪಂದ್ಯವನ್ನಾಡುತ್ತಿರುವ ಹಿರಿಯ ಆಟಗಾರ್ತಿ ಜೂಲನ್ ಗೋಸ್ವಾಮಿ ಅವರು ಮೈದಾನಕ್ಕೆ ಆಗಮಿಸಿ ಟಾಸ್ ಮಾಡಿದರು.
ಭಾರತ ತಂಡದಿಂದ ಭಾವನಾತ್ಮಕ ವಿದಾಯ:ಪಂದ್ಯ ಆರಂಭಕ್ಕೂ ಮೊದಲು ಭಾರತ ತಂಡದ ಎಲ್ಲ ಆಟಗಾರ್ತಿಯರು ಹಿರಿಯ ಆಟಗಾರ್ತಿಗೆ ಭಾವನಾತ್ಮಕ ವಿದಾಯ ಹೇಳಿದರು. ಹಲವು ವರ್ಷಗಳಿಂದ ಒಟ್ಟಿಗೆ ತಂಡದಲ್ಲಿ ಆಡುತ್ತಿರುವ ನಾಯಕಿ ಹರ್ಮನ್ ಪ್ರೀತ್ ಕೌರ್ ಮತ್ತು ಸ್ಮೃತಿ ಮಂಧಾನಾ ಸಹ ಆಟಗಾರ್ತಿಯ ಅಂತಿಮ ಪಂದ್ಯಕ್ಕೆ ಮೈದಾನದಲ್ಲಿಯೇ ಕಣ್ಣೀರು ಹಾಕಿದರು.
ಜೂಲನ್ ಗೋಸ್ವಾಮಿ ಅವರು 2002 ರಲ್ಲಿ ತಮ್ಮ 19ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಭಾರತ ಪರ ಜೂಲನ್ ಗೋಸ್ವಾಮಿ 12 ಟೆಸ್ಟ್, 201 ಏಕದಿನ ಹಾಗೂ 68 ಟಿ-20 ಪಂದ್ಯಗಳನ್ನಾಡಿದ್ದು, 352 ವಿಕೆಟ್ಗಳನ್ನು ಕಬಳಿಸಿದ್ದಾರೆ. ಒಟ್ಟು 6 ಏಕದಿನ ವಿಶ್ವಕಪ್ ಪ್ರತಿನಿಧಿಸಿದ್ದಾರೆ. ಏಕದಿನ ಕ್ರಿಕೆಟ್‌ವೊಂದರಲ್ಲೇ 252 ವಿಕೆಟ್ ಕಬಳಿಸುವ ಮೂಲಕ ಅತಿಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಆಗಿದ್ದಾರೆ.