ನವದೆಹಲಿ:ಸ್ವದೇಶದಲ್ಲಿ ನಡೆಯುವ ಕ್ರಿಕೆಟ್ ಟೂರ್ನಿಗಳಿಗೆ ತಾನು ನೀಡುವ ಟೈಟಲ್ ಪ್ರಾಯೋಜಕತ್ವದಿಂದ ಹಿಂದೆ ಸರಿಯಲು ನಿರ್ಧರಿಸಿರುವ ಪೇಟಿಎಂ, ಇದನ್ನು ಮಾಸ್ಟರ್ಕಾರ್ಡ್ಗೆ ವರ್ಗಾಯಿಸಲು ಕೋರಿದೆ. ಈ ಕೋರಿಕೆಗೆ ಬಿಸಿಸಿಐ ಸಮ್ಮತಿ ಸೂಚಿಸಿದೆ.
ಮುಂದೆ ನಡೆಯುವ ಟೂರ್ನಿಗಳಲ್ಲಿ ಟೈಟಲ್ ಪ್ರಾಯೋಜಕತ್ವವನ್ನು ಮಾಸ್ಟರ್ಕಾರ್ಡ್ ಕಂಪನಿ ವಹಿಸಿಕೊಳ್ಳಲಿದೆ. ಪೇಟಿಎಂ ಸಂಸ್ಥೆ ಇದರಿಂದ ಹಿಂದೆ ಸರಿಯಲು ಮುಂದಾಗಿದೆ ಎಂದು ಇತ್ತೀಚೆಗೆ ನಡೆದ ಬಿಸಿಸಿಐನ ಅಪೆಕ್ಸ್ ಸಭೆಯಲ್ಲಿ ಚರ್ಚಿಸಲಾಗಿದೆ.
ಕೆಲ ದಿನಗಳ ಹಿಂದಷ್ಟೇ ಪೇಟಿಎಂ, ಬಿಸಿಸಿಐ ಜೊತೆಗೆ 2023ರಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಅಂತ್ಯದವರೆಗೂ ಪ್ರಾಯೋಕತ್ವ ನೀಡಲು ಅವಧಿಯನ್ನು ವಿಸ್ತರಿಸಿಕೊಂಡಿತ್ತು.
2019 ರ ಆಗಸ್ಟ್ನಿಂದ ಪೇಟಿಎಂ, ಭಾರತದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್ ಪಂದ್ಯಗಳಿಗೆ ಶೀರ್ಷಿಕೆ ಪ್ರಾಯೋಜಕರಾಗಿ ನಾಲ್ಕು ವರ್ಷಗಳವರೆಗೆ ಪ್ರತಿ ಪಂದ್ಯಕ್ಕೆ 3.80 ಕೋ ರೂಪಾಯಿ ಬಿಡ್ ಸಲ್ಲಿಸಿತ್ತು. ಈ ಒಪ್ಪಂದವು 2023 ರ ಮಾರ್ಚ್ 31ರವರೆಗೆ ಇದೆ.
ಜೆರ್ಸಿ ಪ್ರಾಯೋಜಕ ಬೈಜುನಿಂದ ಹಣ ಬಾಕಿ:ಟೀಮ್ ಇಂಡಿಯಾ ಜೆರ್ಸಿಯ ಪ್ರಾಯೋಜಕತ್ವ ವಹಿಸಿಕೊಂಡಿರುವ ಬೈಜು ಕಂಪನಿ ಬಿಸಿಸಿಐಗೆ 86.21 ಕೋಟಿ ರೂಪಾಯಿ ಹಣವನ್ನು ಬಾಕಿ ಉಳಿಸಿಕೊಂಡಿದೆ ಎಂದು ಹೇಳಲಾಗ್ತಿದೆ. ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪವಾಗಿದೆ. ಇದು ಕೂಡ 2023ರ ಏಕದಿನ ವಿಶ್ವಕಪ್ವರೆಗೂ ಒಪ್ಪಂದ ಮಾಡಿಕೊಳ್ಳಲಾಗಿದೆ.
ಆದರೆ, ಇದನ್ನು ಅಲ್ಲಗಳೆದಿರುವ ಸಂಸ್ಥೆ, "ಬಿಸಿಸಿಐಗೆ ಯಾವುದೇ ಹಣ ಬಾಕಿ ಉಳಿಸಿಕೊಂಡಿಲ್ಲ. ಒಪ್ಪಂದವನ್ನು ವಿಸ್ತರಿಸಿಕೊಳ್ಳಲಾಗಿದೆ. ಒಡಂಬಡಿಕೆಗೆ ಅಂತಿಮ ಮುದ್ರೆ ಬೀಳುವ ಕೆಲಸ ಮಾತ್ರ ಬಾಕಿ ಇದೆ. ಅದಾದ ಬಳಿಕ ಒಪ್ಪಂದದಂತೆ ಹಣವನ್ನು ವರ್ಗಾಯಿಸಲಾಗುವುದು" ಎಂದು ಹೇಳಿದೆ.
ಓದಿ:WI vs IND: ಭಾರತಕ್ಕೆ 3 ರನ್ಗಳ ರೋಚಕ ಗೆಲುವು, ಸರಣಿಯಲ್ಲಿ 1-0 ಮುನ್ನಡೆ