ನವದೆಹಲಿ: ಮಾರ್ಚ್ 4 ರಿಂದ ಏಪ್ರಿಲ್ 3 ರವರೆಗೆ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ಗಾಗಿ ಇಂದು (ಗುರುವಾರ) ಪ್ರಕಟಿಸಲಾದ 15 ಸದಸ್ಯರ ಭಾರತೀಯ ಮಹಿಳಾ ಕ್ರಿಕೆಟ್ ತಂಡದಿಂದ ಸ್ಟಾರ್ ಬ್ಯಾಟರ್ ಜೆಮಿಮಾ ರೋಡ್ರಿಗಸ್ ಅವರನ್ನು ಕೈಬಿಡಲಾಗಿದೆ.
ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ನಾಯಕಿಯಾಗಿ ಹಾಗೂ ಹರ್ಮನ್‌ಪ್ರೀತ್ ಕೌರ್ ಉಪನಾಯಕಿಯಾಗಿ ತಂಡ ಮುನ್ನಡೆಸಲಿದ್ದಾರೆ. 39 ವರ್ಷದ ಮಿಥಾಲಿ ಅವರು ಈ ಮೆಗಾ ಈವೆಂಟ್ ನಂತರ ತಮ್ಮ ನಿವೃತ್ತಿಯ ಬಗ್ಗೆ ಆಲೋಚನೆ ಮಾಡಲಿದ್ದಾರೆ ಎಂದೂ ಹೇಳಲಾಗುತ್ತಿದೆ.
ತಂಡದಲ್ಲಿ ಸ್ಮೃತಿ ಮಂಧಾನ, ದೀಪ್ತಿ ಶರ್ಮಾ, ಜೂಲನ್ ಗೋಸ್ವಾಮಿ ಮತ್ತು ಯುವ ಆಟಗಾರರಾದ ಶೆಫಾಲಿ ವರ್ಮಾ ಸೇರಿದಂತೆ ಇತರೆ ಅನುಭವಿ ಆಟಗಾರರು ಸೇರಿದ್ದಾರೆ. ಇನ್ನು ಕಳಪೆ ಪ್ರದರ್ಶನ ತೋರಿದ ರೋಡ್ರಿಗಸ್ ಜೊತೆ ವೇಗದ ಬೌಲರ್ ಶಿಖಾ ಪಾಂಡೆ ಅವರನ್ನು ಸಹ ತಂಡದಿಂದ ಕೈಬಿಡಲಾಗಿದೆ.
ಕರ್ನಾಟಕದ ವೇದಾ ಕೃಷ್ಣಮೂರ್ತಿ ಕೂಡಾ ಸ್ಥಾನ ಪಡೆಯಲು ವಿಫಲರಾಗಿದ್ದು ಏಕದಿನ ಮಾದರಿಯಲ್ಲಿ ಅವರು ತೋರ್ಪಡಿಸಿದ ಕಳಪೆ ಪ್ರದರ್ಶನ ಕಾರಣದಿಂದ ಸದ್ಯಕ್ಕೆ ಈ ಆಟಗಾರ್ತಿಯರನ್ನು ಕೈಬಿಡಲಾಗಿದೆ ಎಂದು ಬಿಸಿಸಿಐ ಪಿಟಿಐಗೆ ದೃಢಪಡಿಸಿದೆ.
ಇನ್ನು ಫೆಬ್ರವರಿ 11 ರಿಂದ 24 ರವರೆಗೆ ನಡೆಯುವ ನ್ಯೂಜಿಲೆಂಡ್ ವಿರುದ್ಧದ ಐದು ಏಕದಿನ ಪಂದ್ಯಗಳ ಸರಣಿಯಲ್ಲಿ ಇದೇ 15 ಸದಸ್ಯರ ತಂಡವು ಕಾಣಿಸಿಕೊಳ್ಳಲಿದೆ ಎಂದೂ ಬಿಸಿಸಿಐ ಮೂಲಗಳು ಖಚಿತಪಡಿಸಿವೆ.