ನವದೆಹಲಿ:ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳು ಮತ್ತು ಏಕದಿನ ಸರಣಿಗೆ ಭಾರತ ತಂಡವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಕಟಿಸಿದೆ. ಬಿಸಿಸಿಐ ಒಟ್ಟು 18 ಆಟಗಾರರ ಹೆಸರನ್ನು ಪ್ರಕಟಿಸಿದ್ದು, ರಣಜಿ ಟ್ರೋಫಿ ವಿಜೇತ ಸೌರಾಷ್ಟ್ರ ವೇಗಿ ಜಯದೇವ್ ಉನಾದ್ಕತ್ ಕೂಡ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಜಯದೇವ್ 10 ವರ್ಷಗಳ ನಂತರ ಮತ್ತೊಮ್ಮೆ ಏಕದಿನ ಪಂದ್ಯ ಆಡಲಿದ್ದಾರೆ. ಇದಕ್ಕೂ ಮೊದಲು, ಅವರು ತಮ್ಮ ಕೊನೆಯ ಪಂದ್ಯವನ್ನು ವೆಸ್ಟ್ ಇಂಡೀಸ್ ವಿರುದ್ಧ 21 ನವೆಂಬರ್ 2013 ರಂದು ಆಡಿದ್ದರು. ಜಯದೇವ್ ಭಾರತ ಪರ ಇದುವರೆಗೆ 7 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು ಆಸ್ಟ್ರೇಲಿಯಾ ವಿರುದ್ಧ ತಮ್ಮ ಏಕದಿನ ವೃತ್ತಿಜೀವನದ 8 ನೇ ಪಂದ್ಯವನ್ನು ಆಡಲಿದ್ದಾರೆ.
ಭಾರತದ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಕ್ಕೂ ಜಯದೇವ್ ಉನಾದ್ಕತ್ ಆಯ್ಕೆ ಆಗಿದ್ದರು. ಆದರೆ ಮೊದಲ ಪಂದ್ಯದಲ್ಲಿ ಶಮಿ ಮತ್ತು ಸಿರಾಜ್ ವೇಗದ ಪಡೆಯನ್ನು ನಿರ್ವಹಿಸಿದ್ದರು. ಎರಡನೇ ಪಂದ್ಯದ ವೇಳೆಗೆ ಸೌರಾಷ್ಟ್ರ ಫೈನಲ್ ಪ್ರವೇಶ ಪಡೆದ ಕಾರಣ ಉನಾದ್ಕತ್ ಅವರಿಗೆ ಬಿಸಿಸಿಐ ಬಾರ್ಡರ್ ಗವಾಸ್ಕರ್ ಟ್ರೋಫಿಯಿಂದ ಬಿಡುಗಡೆ ನೀಡಿತ್ತು.
ರಣಜಿ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ತಂಡ ಈಡನ್ ಗಾರ್ಡನ್ನಲ್ಲಿ ಬಂಗಾಳವನ್ನು 9 ವಿಕೆಟ್ಗಳಿಂದ ಮಣಿಸಿ ಎರಡನೇ ಬಾರಿಗೆ ಕಪ್ ಜಯಿಸಿದೆ. ಸೌರಾಷ್ಟ್ರದ ನಾಯಕ ಉನಾದ್ಕತ್ ಮೊದಲ ಇನ್ನಿಂಗ್ಸ್ನಲ್ಲಿ 3 ವಿಕೆಟ್ ಹಾಗೂ ಎರಡನೇ ಇನ್ನಿಂಗ್ಸ್ನಲ್ಲಿ 6 ವಿಕೆಟ್ ಪಡೆದು ಮಿಂಚಿದರು. ಎರಡನೇ ಇನ್ನಿಂಗ್ಸ್ನ 6 ವಿಕೆಟ್ ಪಡೆದ ಕಾರಣ ಬಂಗಾಳ ಅಲ್ಪಮೊತ್ತಕ್ಕೆ ಕುಸಿಯಿತು. ಇದರಿಂದ 12 ರನ್ನ ಗುರಿಯನ್ನು ಸುಲಭವಾಗಿ ಸೌರಾಷ್ಟ್ರ ಸಾಧಿಸಿತು.
ಉನಾದ್ಕತ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿ 12 ವರ್ಷ:31 ವರ್ಷ ವಯಸ್ಸಿನ ವೇಗದ ಬೌಲರ್ ಜಯದೇವ್ ಉನದ್ಕತ್ 20 ಡಿಸೆಂಬರ್ 2010 ರಂದು ತಮ್ಮ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದರು. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದ ಭಾರತದ ಸರಣಿಯಲ್ಲಿ ಸೆಂಚುರಿಯನ್ ಸ್ಟೇಡಿಯಂನಲ್ಲಿ ಮೊದಲ ಟೆಸ್ಟ್ ಪಂದ್ಯ ಆಡಿದರು. ಆದರೆ, ಅದ್ಭುತ ಪ್ರದರ್ಶನ ನೀಡಲು ಸಾಧ್ಯವಾಗದ ಕಾರಣ ಟೆಸ್ಟ್ ಪಂದ್ಯದಿಂದ ದೂರ ಸರಿದಿದ್ದರು. ಇದರ ನಂತರ, 22 ಡಿಸೆಂಬರ್ 2022 ರಂದು ಮಿರ್ಪುರದಲ್ಲಿ ಬಾಂಗ್ಲಾದೇಶದ ವಿರುದ್ಧ ತಮ್ಮ ವೃತ್ತಿಜೀವನದ ಎರಡನೇ ಟೆಸ್ಟ್ ಪಂದ್ಯವನ್ನು ಆಡಿದರು. ಸುಮಾರು 12 ವರ್ಷಗಳ ನಂತರ ರೆಡ್ಬಾಲ್ನಲ್ಲಿ ಬೌಲಿಂಗ್ ಮಾಡುವ ಅವಕಾಶ ಸಿಕ್ಕಿತ್ತು.