ಕೊಲಂಬೊ:ಕೆಲವು ವರ್ಷಗಳ ಹಿಂದೆ ಅತ್ಯಂತ ಬಲಿಷ್ಠವಾಗಿದ್ದ ಶ್ರೀಲಂಕಾ ಕ್ರಿಕೆಟ್ ತಂಡ ಇದೀಗ ಎಲ್ಲ ವಿಭಾಗಗಳಲ್ಲೂ ವೈಫಲ್ಯ ಅನುಭವಿಸುತ್ತಿದೆ. ಈ ಹಿಂದಿನ ರೀತಿ ಹೇಳಿಕೊಳ್ಳುವಂತಹ ಪ್ರದರ್ಶನ ಯಾವುದೇ ಆಟಗಾರರಿಂದ ಮೂಡಿ ಬರುತ್ತಿಲ್ಲ.
ಹೀಗಾಗಿ ಎದುರಾಳಿ ತಂಡಗಳೊಂದಿಗೆ ಆಡುತ್ತಿರುವ ಬಹುತೇಕ ಪಂದ್ಯಗಳಲ್ಲಿ ಲಂಕನ್ನರು ಸೋಲು ಕಾಣುತ್ತಿದ್ದಾರೆ. ಇದರಿಂದ ಬೇಸತ್ತಿರುವ ಮಾಜಿ ಕ್ಯಾಪ್ಟನ್ ಮಹೇಲಾ ಜಯವರ್ಧನೆ ಹೊಸ ನಿರ್ಧಾರಕ್ಕೆ ಬಂದಿದ್ದಾರೆ.
ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವ ಮಹೇಲಾ ಜಯವರ್ಧನೆ, ಯಾವುದೇ ರೀತಿಯ ಸಂಭಾವನೆ ಪಡೆದುಕೊಳ್ಳದೇ ಅಂಡರ್-19 ಕ್ರಿಕೆಟ್ ತಂಡಕ್ಕೆ ತರಬೇತಿ ನೀಡಲು ಉತ್ತೇಜನ ತೋರಿಸಿದ್ದಾರೆ. ಅಂಡರ್-19 ತಂಡದ ಸಲಹೆಗಾರನಾಗಿ ಕಾರ್ಯ ನಿರ್ವಹಿಸಲು ಅವರು ನಿರ್ಧರಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಅಲ್ಲಿನ ಕ್ರಿಕೆಟ್ ಮಂಡಳಿಗೆ ಮಾಹಿತಿ ನೀಡಿದ್ದಾರೆ. ಮುಂದಿನ ವರ್ಷ ಅಂಡರ್-19 ವಿಶ್ವಕಪ್ ನಡೆಯಲಿದೆ. ಅದಕ್ಕಾಗಿ ಜಯವರ್ಧನೆ ಬಲಿಷ್ಠ ಲಂಕಾ ತಂಡ ಕಟ್ಟಲು ಈಗಿನಿಂದಲೇ ತಯಾರಿ ನಡೆಸಲಿದ್ದಾರೆ. ಜತೆಗೆ ತಂಡದಿಂದ ಹೊರಬೀಳುವ ಬಹುತೇಕ ಆಟಗಾರರ ಭವಿಷ್ಯದಲ್ಲಿ ಉತ್ತಮ ಕ್ರಿಕೆಟರ್ಸ್ಗಳಾಗಿ ಹೊರಹೊಮ್ಮಲಿರುವ ಕಾರಣ ತಾವು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿರಿ: ಟೀಂ ಇಂಡಿಯಾ ಕೋಚ್ ಸಂಪೂರ್ಣ ಜವಾಬ್ದಾರಿ ದ್ರಾವಿಡ್ಗೆ ನೀಡಬಾರದು: ವಾಸೀಂ ಜಾಫರ್
ಈ ಹಿಂದೆ ಲಂಕಾ ತಂಡದಲ್ಲಿ ಮಹೇಲಾ ಜಯವರ್ಧನೆ, ಕುಮಾರ ಸಂಗಕ್ಕಾರ, ಲಸಿತ್ ಮಲಿಂಗಾ, ತಿಲಕರತ್ನ ದಿಲ್ಶನ್, ಮ್ಯಾಥ್ಯೂಸ್ ಸೇರಿದಂತೆ ಅನೇಕ ದಿಗ್ಗಜರಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಜಯವರ್ಧನೆ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.