ಕರ್ನಾಟಕ

karnataka

ETV Bharat / sports

ಭಾರತ ತಂಡಕ್ಕೆ ಜಸ್ಪ್ರೀತ್ ಬುಮ್ರಾ ಕಮ್​​ಬ್ಯಾಕ್​... ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ನಾಯಕನ ಪಟ್ಟ

ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು, ವೇಗದ ಬೌಲರ್​ ಜಸ್ಪ್ರೀತ್ ಬುಮ್ರಾಗೆ ನಾಯಕನ ಪಟ್ಟ ನೀಡಲಾಗಿದೆ.

By

Published : Jul 31, 2023, 10:52 PM IST

jasprit-bumrah-to-lead-team-india-in-t20i-series-against-ireland
ಭಾರತ ತಂಡಕ್ಕೆ ಜಸ್ಪ್ರೀತ್ ಬುಮ್ರಾ ಕಮ್​​ಬ್ಯಾಕ್​... ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ನಾಯಕನ ಪಟ್ಟ

ಮುಂಬೈ:ಗಾಯದಿಂದ ಚೇತರಿಸಿಕೊಂಡಿರುವ ಭಾರತ ಕ್ರಿಕೆಟ್​ ತಂಡದ ವೇಗದ ಬೌಲರ್​ ಜಸ್ಪ್ರೀತ್ ಬುಮ್ರಾ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದಾರೆ. ಆಗಸ್ಟ್‌ನಲ್ಲಿ ನಡೆಯಲಿರುವ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ ಪ್ರಕಟಿಸಿದೆ.

ಐರ್ಲೆಂಡ್ ವಿರುದ್ಧದ ಸರಣಿಗೆ ಮಾಜಿ ನಾಯಕ ವಿರಾಟ್ ಕೊಹ್ಲಿ, ಹಾಲಿ ನಾಯಕ ರೋಹಿತ್ ಶರ್ಮಾ, ವೇಗದ ಬೌಲರ್​ ಮೊಹಮದ್​ ಸಿರಾಜ್​ ಸೇರಿದಂತೆ ಹಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಜೊತೆಗೆ ಹಿರಿಯರ ಅನುಪಸ್ಥಿತಿಯಲ್ಲಿ ಟಿ20 ತಂಡ ಮುನ್ನಡೆಸುತ್ತಿದ್ದ ಹಾರ್ದಿಕ್ ಪಾಂಡ್ಯ, ಬ್ಯಾಟರ್​ ಸೂರ್ಯಕುಮಾರ್​ ಯಾದವ್, ವಿಕೆಟ್​ ಕೀಪರ್​ ಇಶಾನ್​ ಕಿಶನ್​​ ಕೂಡ ಈ ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿಲ್ಲ. ಯುವ ಬ್ಯಾಟರ್​ ರುತುರಾಜ್ ಗಾಯಕ್ವಾಡ್​ಗೆ ಉಪನಾಯಕನ ಜವಾಬ್ದಾರಿ ಒಲಿದಿದೆ.

ಜಸ್ಪ್ರೀತ್ ಬುಮ್ರಾ ಕಳೆದ ಮಾರ್ಚ್‌ ತಿಂಗಳಿನಲ್ಲಿ ಯಶಸ್ವಿ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸ್ವದೇಶದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟಿ20 ಪಂದ್ಯದ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್​ನಿಂದ ದೂರ ಉಳಿದಿದ್ದರು. ಬೆನ್ನುನೋವು ಕಾಣಿಸಿಕೊಂಡ ಬಳಿಕ ಏಷ್ಯಾಕಪ್‌ ಟೂರ್ನಿಯಲ್ಲಿ ಸಾಕಷ್ಟು ಪಂದ್ಯಗಳಲ್ಲಿ ಕಣಕ್ಕಿಳಿದಿರಲಿಲ್ಲ. ಬಳಿಕ ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟಿ20 ಸರಣಿಗೆ ತಂಡಕ್ಕೆ ಕಮ್​​ಬ್ಯಾಕ್​ ಮಾಡಿದ್ದರು. ಆದರೆ ಗಾಯ ಮರುಕಳಿಸಿತ್ತು.

ತದನಂತರ ಈ ವರ್ಷ ಜನವರಿಯಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾದರು. ಆದರೆ ಅಭ್ಯಾಸದ ವೇಳೆ ಮತ್ತೆ ಗಾಯ ಕಾಡಿತ್ತು. ಹೀಗೆ ಗಾಯದಿಂದಲೇ ಬುಮ್ರಾ 2022ರ ಐಸಿಸಿ ಟಿ20 ವಿಶ್ವಕಪ್ ಮತ್ತು 2023ರ ಇಂಡಿಯನ್ ಪ್ರೀಮಿಯರ್ ಲೀಗ್​ ಟೂರ್ನಿಯಿಂದಲೂ ಸಹ ವಂಚಿತರಾಗಿದ್ದರು.

ಸದ್ಯ ಕಮ್​​ಬ್ಯಾಕ್​ ಸರಣಿಯಲ್ಲೇ ನಾಯಕನ ಪಟ್ಟ ಮರಳಿ ದೊರೆತಿದ್ದು, ಐಪಿಎಲ್​ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ ಪರ ಅದ್ಭುತ ಪ್ರದರ್ಶನ ತೋರಿದ್ದ ಯುವ ಬ್ಯಾಟರ್​​ ರಿಂಕು ಸಿಂಗ್ ಕೂಡ ಸ್ಥಾನ ಪಡೆದಿದ್ದಾರೆ. ರಿಂಕು ಸಿಂಗ್​ 14 ಪಂದ್ಯಗಳಿಂದ ನಾಲ್ಕು ಅರ್ಧ ಶತಕಗಳೊಂದಿಗೆ 474 ರನ್ ಬಾರಿಸಿದ್ದರು. ಜೊತೆಗೆ ಕನ್ನಡಿಗ, ವೇಗಿ ಪ್ರಸಿದ್ಧ್ ಕೃಷ್ಣ ಕೂಡ ತಂಡಕ್ಕೆ ಮರಳಿದ್ದಾರೆ. ಪ್ರಸಿದ್ಧ್ ಕೊನೆಯದಾಗಿ ಟೀಮ್ ಇಂಡಿಯಾ ಪರ 2022ರ ಆಗಸ್ಟ್‌ನಲ್ಲಿ ಜಿಂಬಾಬ್ವೆ ವಿರುದ್ಧ ಆಡಿದ್ದರು. ಸೊಂಟದ ಗಾಯದಿಂದ ಅವರು 2023ರ ಐಪಿಎಲ್​ನಿಂದಲೂ ಹೊರಗುಳಿದಿದ್ದರು.

ಜೊತೆಗೆ 2020ರ ಫೆಬ್ರವರಿ ತಿಂಗಳಲ್ಲಿ ಟೀಂ ಇಂಡಿಯಾ ಪರ ಕೊನೆಯದಾಗಿ ಕಾಣಿಸಿಕೊಂಡಿದ್ದ ಆಲ್-ರೌಂಡರ್ ಶಿವಂ ದುಬೆ ಮತ್ತೆ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. 2023ರ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಪರ ಅಬ್ಬರಿಸಿದ್ದ ದುಬೆ 16 ಪಂದ್ಯಗಳಲ್ಲಿ ಮೂರು ಅರ್ಧಶತಕಗಳೊಂದಿಗೆ 418 ರನ್ ಗಳಿಸಿದ್ದರು. ಅಲ್ಲದೆ, ಪಂಜಾಬ್ ಕಿಂಗ್ಸ್ ಪರ ಆಡಿದ್ದ ವಿಕೆಟ್ ಕೀಪರ್ ಕಂ ಬ್ಯಾಟರ್​​ ಜಿತೇಶ್ ಶರ್ಮಾ ಕೂಡ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ. ಐರ್ಲೆಂಡ್​​ ವಿರುದ್ಧದ ಟಿ20 ಸರಣಿಯು ಆಗಸ್ಟ್ 18ರಿಂದ ಆರಂಭವಾಗಲಿದ್ದು, ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ಆಗಸ್ಟ್ 18, 20 ಮತ್ತು 23 ರಂದು ಪಂದ್ಯಗಳು ನಡೆಯಲಿವೆ.

ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಹೀಗಿದೆ:ಜಸ್ಪ್ರೀತ್ ಬುಮ್ರಾ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿ.ಕೀ), ಜಿತೇಶ್ ಶರ್ಮಾ (ವಿ.ಕೀ), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಅವೇಶ್ ಖಾನ್.

ಇದನ್ನೂ ಓದಿ:ವಿಶ್ವಕಪ್ ಹಿನ್ನೆಲೆಯಲ್ಲಿ ಬೌಲಿಂಗ್​​ಗೆ ಹೆಚ್ಚು ಗಮನ ಹರಿಸುತ್ತಿದ್ದಾರಂತೆ ಹಾರ್ದಿಕ್​.. ವಿಂಡೀಸ್​ ವಿರುದ್ಧವೂ ಅದಕ್ಕೆ ಒತ್ತು

ABOUT THE AUTHOR

...view details