ಡರ್ಬಿನ್ (ಐರ್ಲೆಂಡ್): 11 ತಿಂಗಳ ದೀರ್ಘ ಚೇತರಿಕೆಯ ನಂತರ ಜಸ್ಪ್ರೀತ್ ಬುಮ್ರಾ ತಂಡಕ್ಕೆ ಸೇರಿ ಐರ್ಲೆಂಡ್ ವಿರುದ್ಧ ಉತ್ತಮ ಕಮ್ಬ್ಯಾಕ್ ಮಾಡಿದ್ದಾರೆ. ಅಲ್ಲದೇ ಭಾರತದ ತಂಡದ ಟಿ-20 ನಾಯಕರಾದ ಅವರು ದಾಖಲೆ ಬರೆದಿದ್ದಾರೆ. ಭಾರತದ ಟಿ-20 ತಂಡವನ್ನು ಮುನ್ನಡೆಸಿದ ಮೊದಲ ಬೌಲರ್ ಎಂಬ ಖ್ಯಾತಿ ಗೆ ಬುಮ್ರಾ ಒಳಗಾಗಿದ್ದಾರೆ.
2006ರಲ್ಲಿ ವಿರೇಂದ್ರ ಸೆಹ್ವಾಗ್ ಭಾರತವನ್ನು ಮೊದಲ ಬಾರಿಗೆ ಟಿ-20ಯಲ್ಲಿ ಮುನ್ನಡೆಸಿದ್ದರು. ನಂತರ ಮಹೇಂದ್ರ ಸಿಂಗ್ ಧೋನಿ, ಗೌತಮ್ ಗಂಭೀರ್, ಸುರೇಶ್ ರೈನಾ, ಅಜಿಂಕ್ಯಾ ರಹಾನೆ, ಶಿಖರ್ ಧವನ್, ಕೆ. ಎಲ್ ರಾಹುಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ನಾಯಕತ್ವ ನಿರ್ವಹಿಸಿದ್ದಾರೆ. ಇವರೆಲ್ಲರೂ ಬ್ಯಾಟರ್ಗಳಾಗಿದ್ದು ಬುಮ್ರಾ ಮೊದಲ ಬೌಲರ್ ಆಗಿದ್ದಾರೆ.
2022 ರಲ್ಲಿ ಆಸ್ಟ್ರೇಲಿಯಾದ ವಿರುದ್ಧ ಆಡಿದ ನಂತರ ಬುಮ್ರಾ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡ ನಂತರ ತಂಡಕ್ಕೆ ಸೇರಿದ್ದಾರೆ. ಪಂದ್ಯಕ್ಕೆ ಒಂದು ದಿನ ಮೊದಲು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸಂಪೂರ್ಣ ಫಿಟ್ ಆಗಿದ್ದು, 100 ಪ್ರತಿಶತ ಪ್ರದರ್ಶನಕ್ಕೆ ಸಿದ್ಧನಿದ್ದೇನೆ ಎಂದಿದ್ದರು. ಅದರಂತೆ ತಮ್ಮ ನಾಯಕತ್ವದಲ್ಲಿ ಮೊದಲ ಪಂದ್ಯವನ್ನು ಗೆದ್ದುಕೊಂಡಿದ್ದಾರೆ. ಐರ್ಲೆಂಡ್ ವಿರುದ್ಧ ಮಳೆಯ ಕಾರಣ ಡಿಎಲ್ಎಸ್ನ ನಿಯಮದಂತೆ ಭಾರತ 2 ರನ್ ಗೆಲುವು ದಾಖಲಿಸಿದೆ.
ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ತೆಗೆದುಕೊಂಡ ಬುಮ್ರಾ ಮೊದಲ ಓವರ್ ಮಾಡಿದರು. ಮೊದಲ ಬಾಲ್ನಲ್ಲಿ ಬೌಂಡರಿ ಕೊಟ್ಟರೆ, ಎರಡನೇ ಚೆಂಡಿನಲ್ಲಿ ವಿಕೆಟ್ ಪಡೆದರು. ಮತ್ತೆರಡು ಡಾಟ್ ಬಾಲ್ಗಳಾದರೆ, ಐದನೇ ಚೆಂಡಿನಲ್ಲಿ ಎರಡನೇ ವಿಕೆಟ್ ಪಡೆದರು. ಕೊನೆಯ ಎಸೆತ ಡಾಟ್ ಆಗಿತ್ತು. ಮೊದಲ ಓವರ್ಗೆ ಕೇವಲ 4 ರನ್ ಬಿಟ್ಟುಕೊಟ್ಟು ಎರಡು ವಿಕೆಟ್ ಪಡೆದರು. ನಂತರ ಮೂರನೇ ಓವರ್ನಲ್ಲಿ 6 ರನ್, 16 ಓವರ್ನಲ್ಲಿ 13 ರನ್ ಕೊಟ್ಟು ದುಬಾರಿಯಾದರು. 19 ನೇ ಓವರ್ನಲ್ಲಿ 1 ರನ್ ಬಿಟ್ಟುಕೊಟ್ಟರು. ಒಟ್ಟು 4 ಓವರ್ಗೆ 24 ರನ್ ನೀಡಿ 2 ವಿಕೆಟ್ ಪಡೆದರು. ಬಾಲ್ಗೆ 1 ರನ್ನಂತೆ 6 ಎಕಾನಮಿಯನ್ನು ಸಾಧಿಸಿದರು. ಇದು ಅವರ ಉತ್ತಮ ಕಮ್ಬ್ಯಾಕ್ ಆಗಿದೆ.
ಪಂದ್ಯದ ನಂತರ ಬುಮ್ರಾ,"ತುಂಬಾ ಚೆನ್ನಾಗಿದೆ, ಎನ್‌ಸಿಎಯಲ್ಲಿ ನಾನು ಮಾಡಿದ ಹಲವು ಸೆಷನ್‌ಗಳನ್ನು ಕೆಲ ತಪ್ಪುಗಳನ್ನು ಬಿಡಲು ಮತ್ತು ಹೊಸತನ್ನು ಕಲಿಯಲು ಸಹಕಾರ ಆಗಿದೆ. ಅಲ್ಲಿನ ಸಿಬ್ಬಂದಿಗೆ ಕ್ರೆಡಿಟ್ ಸಲ್ಲುತ್ತದೆ. ಆರಂಭದಲ್ಲಿ ಸ್ವಲ್ಪ ಸ್ವಿಂಗ್ ಇತ್ತು ಆದ್ದರಿಂದ ನಾವು ಅದನ್ನು ಬಳಸಲು ಬಯಸಿದೆವು. ಅದೃಷ್ಟವಶಾತ್ ನಾವು ಟಾಸ್ ಗೆದ್ದೆವು ಮತ್ತು ಅದು ನಮ್ಮ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲು ಸಹಕಾರಿ ಆಯಿತು. ಹವಾಮಾನದಿಂದಾಗಿ ಸ್ವಲ್ಪ ಸಹಾಯವಾಯಿತು, ತುಂಬಾ ಸಂತೋಷವಾಗಿದೆ. ಪ್ರತಿ ಪಂದ್ಯದಲ್ಲೂ ಇನ್ನೂ ಹೆಚ್ಚನ್ನು ಬಯಸುತ್ತೇವೆ. ವಿಕೆಟ್ ಉರುಳಿದ ನಂತರವೂ ಐರ್ಲೆಂಡ್ ಉತ್ತಮವಾಗಿ ಆಡಿತು" ಎಂದಿದ್ದಾರೆ.
ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ನಿಗದಿತ ಓವರ್ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು, 139 ರನ್ ಗಳಿಸಿತ್ತು. ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ 6.5 ಓವರ್ಗೆ 2 ವಿಕೆಟ್ ಕಳೆದುಕೊಂಡು 47 ರನ್ ಗಳಿಸಿ ಆಡುತ್ತಿದ್ದಾಗ ಮಳೆ ಬಂದು ಪಂದ್ಯವನ್ನು ನಿಲ್ಲಿಸಲಾಯಿತು. ನಂತರ ವರುಣ ಬಿಡುವು ಕೊಡದ ಕಾರಣ ಡಿಎಲ್ಎಸ್ ನಿಯಮದಂತೆ ಭಾರತ 2 ರನ್ನಿಂದ ಗೆಲುವು ಸಾಧಿಸಿತು.
ಇದನ್ನೂ ಓದಿ:ಭಾರತ - ಐರ್ಲೆಂಡ್ ಪಂದ್ಯಕ್ಕೆ ಮಳೆರಾಯನ ಅಡ್ಡಿ.. ಡೆಕ್ವರ್ತ್ ಲೂಯಿಸ್ ಪ್ರಕಾರ ಭಾರತಕ್ಕೆ 2 ರನ್ಗಳ ರೋಚಕ ಗೆಲುವು