ಕ್ಯಾಂಡಿ (ಶ್ರೀಲಂಕಾ): ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ವೈಯಕ್ತಿಕ ಕಾರಣಗಳಿಂದಾಗಿ ಏಷ್ಯಾಕಪ್ ನಡುವೆ ಮುಂಬೈಗೆ ತೆರಳಿದ್ದಾರೆ. ಸೆಪ್ಟೆಂಬರ್ 6 ರಿಂದ ಪ್ರಾರಂಭವಾಗುವ ಪಂದ್ಯಾವಳಿಯ ಸೂಪರ್ ಸ್ಟೇಜ್‌ಗೆ ಬೌಲರ್ ಸಮಯಕ್ಕೆ ಮರಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ನಿನ್ನೆ ನಡೆದ ಪಂದ್ಯದಲ್ಲಿ ಬುಮ್ರಾಗೆ ಬೌಲಿಂಗ್ ಅವಕಾಶ ಸಿಗಲಿಲ್ಲ. ಸಿಕ್ಕ ಬ್ಯಾಟಿಂಗ್ನಲ್ಲಿ ಮೂರು ಬೌಂಡರಿ ಸಹಿತ 16 ರನ್ ಗಳಿಸಿದ್ದರು.
ಗಾಯದಿಂದ ಚೇತರಿಸಿಕೊಂಡ ನಂತರ ಬುಮ್ರಾ ಐರ್ಲೆಂಡ್ ಪ್ರವಾಸ ಮುಗಿಸಿ ಏಷ್ಯಾಕಪ್ಗೆ ಆಯ್ಕೆ ಆಗಿದ್ದರು. ಬುಮ್ರಾ ಏಕದಿನ ಮಾದರಿಯ ಪಂದ್ಯ ಆಡದೇ ವರ್ಷಗಳೇ ಕಳೆದಿವೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಯಲ್ಲಿ 10 ಓವರ್ಗಳನ್ನು ಮಾಡಿ ಫಿಟ್ನೆಸ್ ಸಾಬೀತು ಪಡಿಸಿದ್ದರು. ಭಾರತದಲ್ಲಿ ನಡೆಯುವ ವಿಶ್ವಕಪ್ಗೆ ಭರವಸೆಯ ಆಟಗಾರ ಆಗಿದ್ದು, ಅವರ ಕಮ್ಬ್ಯಾಕ್ಗೆ ಇಡೀ ಕ್ರಿಕೆಟ್ ಜಗತ್ತು ಎದುರು ನೋಡುತ್ತಿದೆ.
ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಪ್ರಮುಖ ವೇಗಿಗಳಾಗಿ ಸಿರಾಜ್ ಮತ್ತು ಬುಮ್ರಾ ಆಯ್ಕೆ ಆಗಿದ್ದರು. ಸೋಮವಾರ ನೇಪಾಳದ ವಿರುದ್ಧ ನಡೆಯುವ ಪಂದ್ಯದಲ್ಲಿ ಮೊಹಮ್ಮದ್ ಶಮಿ ಬುಮ್ರಾ ಅವರ ಜಾಗದಲ್ಲಿ ಆಡುವ ಸಾಧ್ಯತೆ ಇದೆ. ವೇಗದ ಬೌಲಿಂಗ್ಗೆ ಪ್ರಸಿದ್ಧ್ ಕೃಷ್ಣಾ ಕೂಡಾ ಇನ್ನೊಂದು ಆಯ್ಕೆಯಾಗಿ ತಂಡದಲ್ಲಿದ್ದಾರೆ.
ಮೊದಲ ಮಗುವಿನ ನಿರೀಕ್ಷೆಯಲ್ಲಿ ಬುಮ್ರಾ: ಕ್ರಿಕೆಟಿಗ ಜಸ್ಪ್ರೀತ್ ಬುಮ್ರಾ ಮತ್ತು ಟಿವಿ ನಿರೂಪಕಿ ಸಂಜನಾ ಗಣೇಶನ್ 2021ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ಈ ಕಾರಣಕ್ಕೆ ಬುಮ್ರಾ ಮುಂಬೈಗೆ ಮರಳಿದ್ದಾರೆ ಎಂದು ವರದಿಯಾಗುತ್ತಿದೆ. ಆದರೆ ಈ ಬಗ್ಗೆ ಎರಡೂ ಕುಟುಂಬದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಸೆಪ್ಟೆಂಬರ್ 10ರ ವರೆಗೆ ಬುಮ್ರಾ ಅಲಭ್ಯ: ಬುಮ್ರಾ ಸೆಪ್ಟೆಂಬರ್ 10ರ ನಂತರ ತಂಡವನ್ನು ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ. 10ರ ವರೆಗೆ ತಂಡಕ್ಕೆ ಮರಳದಿದ್ದಲ್ಲಿ ನೇಪಾಳದ ವಿರುದ್ಧದ ಪಂದ್ಯದ ಜೊತೆಗೆ ಮತ್ತೆರಡು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಭಾರತ ಸೂಪರ್ ಫೋರ್ಗೆ ಪ್ರವೇಶಿಸಿದರೆ ಸೆಪ್ಟೆಂಬರ್ 8ರಂದು ಪಾಕಿಸ್ತಾನದ ವಿರುದ್ಧ ಭಾರತ ಪಂದ್ಯವನ್ನು ಆಡುವ ಸಂಭವವಿದೆ.
ಏಷ್ಯಾಕಪ್ನ ಭಾರತ ತಂಡ:ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾಜ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್ (ಪ್ರಯಾಣ ಮೀಸಲು).
ಇದನ್ನೂ ಓದಿ:ನೇಪಾಳದ ಪಂದ್ಯಕ್ಕೂ ವರುಣನ ಅಡ್ಡಿಯ ಆತಂಕ.. ಭಾರತದ ಸೂಪರ್ ಫೋರ್ ಆಯ್ಕೆ ಹೇಗೆ?