ನವದೆಹಲಿ:ಶ್ರೀಲಂಕಾ ವಿರುದ್ಧ ನಾಳೆಯಿಂದ ಆರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿಯಿಂದ ವೇಗಿ ಜಸ್ಪ್ರೀತ್ ಬೂಮ್ರಾ ಹೊರಬಿದ್ದಿದ್ದಾರೆ. ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಬೂಮ್ರಾರನ್ನು ತಂಡದಿಂದ ಕೈಬಿಡಲಾಗಿದೆ. ಬೂಮ್ರಾ ಸ್ಥಾನಕ್ಕೆ ಯಾರ ಹೆಸರನ್ನೂ ಬಿಸಿಸಿಐ ಸೂಚಿಸಿಲ್ಲ. ಲಂಕಾ ಸರಣಿಗೆ ಈ ಮೊದಲು ತಂಡದ ಘೋಷಣೆ ವೇಳೆ ವೇಗಿಗೆ ಸ್ಥಾನ ನೀಡಲಾಗಿತ್ತು. ನಾಳೆ ಉಭಯ ತಂಡಗಳ ಮಧ್ಯೆ ಗುವಾಹಟಿಯಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಅದಕ್ಕೂ ಮೊದಲು ಬಿಸಿಸಿಐ ಈ ಮಹತ್ತರ ನಿರ್ಧಾರವನ್ನು ಘೋಷಿಸಿದೆ.
ಜಸ್ಪ್ರೀತ್ ಬೂಮ್ರಾ ಇನ್ನೂ ಸಂಪೂರ್ಣವಾಗಿ ಗಾಯದಿಂದ ಚೇತರಿಕೆ ಕಂಡಿಲ್ಲ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂದು ಬಿಸಿಸಿಐ ತನ್ನ ವೆಬ್ಸೈಟ್ನಲ್ಲಿ ತಿಳಿಸಿದೆ. ಆದಾಗ್ಯೂ, ಭಾರತ ತಂಡದ ಹಿರಿಯರ ಆಯ್ಕೆ ಸಮಿತಿಯು ಬುಮ್ರಾ ಅವರ ಬದಲಿ ಆಟಗಾರನನ್ನು ಹೆಸರಿಸಿಲ್ಲ.
ವಿಶ್ವಕಪ್ನಿಂದಲೂ ಹೊರಬಿದ್ದಿದ್ದ ಬೂಮ್ರಾ:ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ವೇಳೆ ಭಾರತದ ಪ್ರಮುಖ ವೇಗಿ ಜಸ್ಪ್ರೀತ್ ಬೂಮ್ರಾ ಬೆನ್ನು ನೋವಿನ ಕಾರಣಕ್ಕಾಗಿ ಹೊರಬಿದ್ದಿದ್ದರು. ಅಂದಿನಿಂದಲೂ ಕ್ರಿಕೆಟ್ನಿಂದ ದೂರವುಳಿದಿದ್ದಾರೆ. ವಿಶ್ವಕಪ್ಗೂ ಮೊದಲು ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದ ಬೂಮ್ರಾ ಮೊದಲ ಪಂದ್ಯವಾಡಿದ್ದರು. ಬಳಿಕ ಉಳಿದೆರಡು ಪಂದ್ಯಗಳಿಂದ ಹೊರಗುಳಿದಿದ್ದರು. ಇದಾದ ಬಳಿಕ ಬೂಮ್ರಾ ಸತತವಾಗಿ ಆರು ತಿಂಗಳಿನಿಂದ ಕ್ರಿಕೆಟ್ನಿಂದ ದೂರವಿದ್ದಾರೆ. ಕಾಲಿಗೆ ಗಾಯ ಮಾಡಿಕೊಂಡಿದ್ದ ಆಲ್ರೌಂಡರ್ ರವೀಂದ್ರ ಜಡೇಜಾ ಅವರು ಕೂಡ ಸರಣಿಗೆ ಆಯ್ಕೆಯಾಗಿಲ್ಲ.
ಏಕದಿನ ಸರಣಿ ಪಂದ್ಯಗಳ ಪಟ್ಟಿ:ಜನವರಿ 10 ರಂದು ಗುವಾಹಟಿಯಲ್ಲಿ ಶ್ರೀಲಂಕಾ ವಿರುದ್ಧ ಭಾರತ ತನ್ನ ಮೊದಲ ಏಕದಿನ ಪಂದ್ಯವನ್ನು ಆಡಲಿದೆ. ಬಳಿಕ ಜನವರಿ 12 ರಂದು ಕೋಲ್ಕತ್ತಾದಲ್ಲಿ 2ನೇ, ತಿರುವನಂತಪುರಂನಲ್ಲಿ ಮೂರನೇ ಮತ್ತು ಕೊನೆಯ ಪಂದ್ಯ ನಡೆಯಲಿದೆ. ನ್ಯೂಜಿಲ್ಯಾಂಡ್ ಮತ್ತು ಶ್ರೀಲಂಕಾ ವಿರುದ್ಧದ ಟಿ20, ಏಕದಿನ ಸರಣಿಯಿಂದ ತಂಡದ ನಾಯಕ ರೋಹಿತ್ ಶರ್ಮಾ ಅವರು ಹೊರಗುಳಿದಿದ್ದರು. ಈ ಸರಣಿಗೆ ವಾಪಸ್ ಆಗಿದ್ದು, ಮುಂದಾಳತ್ವ ವಹಿಸಲಿದ್ದಾರೆ. ಈ ಮೂಲಕ ಏಕದಿನ ವಿಶ್ವಕಪ್‌ಗಾಗಿ ಸಿದ್ಧತೆಗಳನ್ನು ಅಧಿಕೃತವಾಗಿ ಪ್ರಾರಂಭಿಸಲಿದೆ. ಅವರ ಜೊತೆಗೆ ಇನ್ನೂ ಅನೇಕ ಅನುಭವಿ ಆಟಗಾರರು ಮತ್ತೆ ತಂಡವನ್ನು ಸೇರಿಕೊಂಡಿದ್ದಾರೆ.