ಹೈದರಾಬಾದ್: ವೆಸ್ಟ್ ಇಂಡೀಸ್ ಪ್ರವಾಸದ ನಂತರ ಟಿ20 ಸ್ಟಾರ್ಗಳ ಪಡೆ ಐರ್ಲೆಂಡ್ಗೆ ಇಂದು ತೆರಳಿದೆ. ಗಾಯದಿಂದ ಚೇತರಿಸಿಕೊಂಡಿರುವ ವೇಗಿ ಜಸ್ಪ್ರಿತ್ ಬುಮ್ರಾ ಅವರ ನಾಯಕತ್ವದಲ್ಲಿ ತಂಡ ಐರ್ಲೆಂಡ್ನಲ್ಲಿ ಪಂದ್ಯಗಳನ್ನು ಆಡಲಿದೆ. ಬಿಸಿಸಿಐ ಆಟಗಾರರು ಐರ್ಲೆಂಡ್ ಪ್ರವಾಸ ಬೆಳೆಸಿರುವುದನ್ನು ಎಕ್ಸ್ ಆ್ಯಪ್ ಖಾತೆಯಲ್ಲಿ ಹಂಚಿಕೊಂಡಿದೆ. ಫೋಟೋದಲ್ಲಿ ಬುಮ್ರಾ, ರುತುರಾಜ್ ಗಾಯಕ್ವಾಡ್, ಪ್ರಸಿದ್ಧ ಕೃಷ್ಣ, ರಿಂಕು ಸಿಂಗ್ ಮತ್ತು ಶಿವಂ ದುಬೆ ಕಾಣಿಸಿಕೊಂಡಿದ್ದಾರೆ.
ಭಾರತ ಮತ್ತು ಐರ್ಲೆಂಡ್ ನಡುವಿನ ಮೂರು ಟಿ20 ಪಂದ್ಯಗಳು ಡಬ್ಲಿನ್‌ನ ಮಲಾಹೈಡ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ಆಗಸ್ಟ್ 18, 20 ಮತ್ತು 23 ರಂದು ನಡೆಯಲಿವೆ. ಜೂನ್ 2022 ರಲ್ಲಿ ಭಾರತ ಮತ್ತು ಐರ್ಲೆಂಡ್ ಎರಡು ಪಂದ್ಯಗಳ ಟಿ20 ಸರಣಿಯನ್ನು ಆಡಿದ್ದವು. ಇದರಲ್ಲಿ ಭಾರತ 2-0 ಅಂತರದಲ್ಲಿ ಸರಣಿಯನ್ನು ಗೆದ್ದರು.
ಇಬ್ಬರು ಗಾಯಾಳುಗಳ ಕಮ್ಬ್ಯಾಕ್: 2022 ರಲ್ಲಿ ಇಂಗ್ಲೆಂಡ್ ವಿರುದ್ಧ ಜಸ್ಪ್ರಿತ್ ಬುಮ್ರಾ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. ನಂತರ ಬೆನ್ನು ನೋವಿನ ಸಮಸ್ಯೆಯಿಂದ ಅವರು ವೈದ್ಯಕೀಯ ಚಿಕಿತ್ಸೆಗೆ ಒಳಗಾದರು. ಸುಮಾರು ಒಂದು ವರ್ಷದ ನಂತರ ಬುಮ್ರಾ ಸಂಪೂರ್ಣವಾಗಿ ಚೇತರಿಸಿಕೊಂಡು ತಂಡಕ್ಕೆ ಸೇರಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಭಾರತ ತಂಡ ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್ ಆಡುತ್ತಿರುವ ಕಾರಣ ಬುಮ್ರಾ ಅವರ ಹಿಂದಿರುಗುವಿಕೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಭಾರತ ತಂಡಕ್ಕೆ ಆಯ್ಕೆ ಆಗಿ 14 ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಿ 25 ವಿಕೆಟ್ ಕಬಳಿಸಿದ್ದ ಪ್ರಸಿದ್ಧ ಕೃಷ್ಣ ಗಾಯಕ್ಕೆ ತುತ್ತಾಗಿದ್ದರು. ಅವರು ಸಹ ಚೇತರಿಸಿಕೊಂಡಿದ್ದು, ಮತ್ತೆ ತಂಡಕ್ಕೆ ಆಯ್ಕೆ ಆಗಿದ್ದಾರೆ. ಮುಂದಿನ ಮೂರು ತಿಂಗಳು ಭಾರತ ಆಡಲಿರುವ ಎರಡು ಮಹತ್ವದ ಕಪ್ಗಳಿಗೆ ಕೃಷ್ಣ ಅವರ ಮರಳುವಿಕೆಯೂ ಮುಖ್ಯವಾಗಿದೆ. ಅದರ ಜೊತೆಗೆ ಟಿ20 ಪಾದಾರ್ಪಣೆಗೂ ಕನ್ನಡಿಗ ಪ್ರಸಿದ್ಧ ಕೃಷ್ಣ ಎದುರು ನೋಡುತ್ತಿದ್ದಾರೆ.