ನವದೆಹಲಿ: ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಗೆ ಭಾರತ ತಂಡಕ್ಕೆ ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾರನ್ನು ಸೇರಿಸಲಾಗಿದೆ. ಬೆನ್ನು ನೋವು ಮತ್ತು ಒತ್ತಡದ ಕಾರಣದಿಂದಾಗಿ ಕಳೆದ ಸೆಪ್ಟೆಂಬರ್‌ನಿಂದ ತಂಡದಿಂದ ಹೊರಗುಳಿದಿದ್ದರು. ಅಲ್ಲದೇ ಟಿ20 ವಿಶ್ವಕಪ್ಗೂ ಅಲಭ್ಯರಾಗಿದ್ದರು. ಅಂದಿನಿಂದ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆದು, ಫಿಟ್ನೆಸ್ಗಾಗಿ ಶ್ರಮಿಸುತ್ತಿದ್ದರು.
ಬಾಂಗ್ಲಾದೇಶದ ವಿರುದ್ಧದ ಎರಡನೇ ಏಕದಿನ ಪಂದ್ಯದ ವೇಳೆ ಕ್ಷೇತ್ರ ರಕ್ಷಣೆಯಲ್ಲಿ ರೋಹಿತ್ ಶರ್ಮಾ ಹೆಬ್ಬೆರಳಿಗೆ ಗಾಯವಾಗಿತ್ತು. ಢಾಕಾದಿಂದ ನೇರವಾಗಿ ಭಾರತಕ್ಕೆ ಬಂದಿದ್ದ ಶರ್ಮಾ ಚಿಕಿತ್ಸೆ ಪಡೆದಿದ್ದರು. ನಂತರದ ಪಂದ್ಯಗಳ ನಾಯಕತ್ವ ಕೆ.ಎಲ್.ರಾಹುಲ್ಗೆ ನೀಡಲಾಗಿತ್ತು. ಅವರು ಟೆಸ್ಟ್ ಸರಣಿಯನ್ನೂ ಮುನ್ನಡೆಸಿದ್ದರು. ಲಂಕಾ ವಿರುದ್ಧದ ಟಿ20ಗೆ ಹಾರ್ದಿಕ್ಗೆ ನಾಯಕತ್ವ ಹೊಣೆ ನೀಡಲಾಗಿದ್ದು, ಏಕದಿನ ಪಂದ್ಯಗಳಿಗೆ ಮತ್ತೆ ರೋಹಿತ್ ನಾಯಕತ್ವ ವಹಿಸಲಿದ್ದಾರೆ.
16 ಸದಸ್ಯರ ಭಾರತೀಯ ತಂಡವನ್ನು ಬಿಸಿಸಿಐ ಡಿಸೆಂಬರ್ 27ರಂದು ಪ್ರಕಟಿಸಿತ್ತು. ನಂತರದಲ್ಲಿ ಬುಮ್ರಾ ತಂಡದಲ್ಲಿ ಸ್ಥಾನ ಪಡೆಯಲಿಲ್ಲ. ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯ ಗುವಾಹಟಿಯಲ್ಲಿ, ಎರಡನೇ ಪಂದ್ಯ ಕೋಲ್ಕತ್ತಾದ ಈಡನ್ಸ್ ಗಾರ್ಡನ್ ಮತ್ತು ಮೂರನೇ ಪಂದ್ಯ ತಿರುವನಂತಪುರಂನಲ್ಲಿ ನಡೆಯಲಿದೆ. ಎಲ್ಲಾ ಪಂದ್ಯಗಳು ಹಗಲು-ರಾತ್ರಿ ನಡೆಯಲಿದ್ದು, ಮಧ್ಯಾಹ್ನ 1:30ಕ್ಕೆ ಆರಂಭವಾಗಲಿದೆ.
ಶ್ರೀಲಂಕಾ ಏಕದಿನ ಪಂದ್ಯಕ್ಕೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಟಿ20 ನಾಯಕ), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್.