ಮುಂಬೈ: ಹೊಸ ಫ್ರಾಂಚೈಸಿಗಳ ಎಲ್ಲಾ ರೀತಿಯ ಕರಾರುಗಳು ಮಂಗಳವಾರ ಮುಗಿದಿದ್ದು, ತಮ್ಮ ಫ್ರಾಂಚೈಸಿ ಹಕ್ಕುಪತ್ರಗಳನ್ನು ಪಡೆದುಕೊಂಡಿವೆ. ಇದೀಗ ಜನವರಿ 22ರೊಳಗೆ ತಮ್ಮ ರಿಟೈನ್ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಬಿಸಿಸಿಐ ಸೂಚನೆ ನೀಡಿದೆ.
ಅಕ್ಟೋಬರ್ನಲ್ಲಿ ನಡೆದಿದ್ದ ಬಿಡ್ನಲ್ಲಿ ಲಖನೌ ಫ್ರಾಂಚೈಸಿಯನ್ನು ಆರ್ಪಿಎಸ್ಜಿ ಗ್ರೂಪ್ 7,090 ಕೋಟಿ ರೂಗಳಿಗೆ ಖರೀದಿಸಿತ್ತು. ಅಹ್ಮದಾಬಾದ್ ತಂಡವನ್ನು ಸಿವಿಸಿ ಕ್ಯಾಪಿಟಲ್ಸ್ 5,625 ಕೋಟಿ ರೂ ನೀಡಿ ಪಡೆದುಕೊಂಡಿದೆ.
ಈ ಎರಡೂ ತಂಡಗಳಿಗೆ ತಲಾ ಮೂವರು ಆಟಗಾರರನ್ನು ಮೆಗಾ ಹರಾಜಿಗೂ ಮುನ್ನ ಖರೀದಿಸುವ ಅವಕಾಶವಿದೆ. ಹಾಗಾಗಿ ಜನವರಿ 22, ಸಾಯಂಕಾಲ 5 ಗಂಟೆಯೊಳಗೆ ತಮ್ಮ ರಿಟೈನ್ ಆಟಗಾರರನ್ನು ಘೋಷಿಸಲು ಬಿಸಿಸಿಐ ಫ್ರಾಂಚೈಸಿಗಳಿಗೆ ತಿಳಿಸಿದೆ.
ಈ ತಂಡಗಳು ಇಬ್ಬರು ಭಾರತೀಯ ಆಟಗಾರರನ್ನು ಮತ್ತು ಒಬ್ಬ ವಿದೇಶಿ ಆಟಗಾರನನ್ನು ತಂಡಕ್ಕೆ ನೇರವಾಗಿ ಆಯ್ಕೆ ಮಾಡಿಕೊಳ್ಳುವ ಅವಕಾಶ ಹೊಂದಿವೆ. ಐಪಿಎಲ್ ಸಲಹಾ ಸಮಿತಿಯ ಪ್ರಕಾರ, ಹೊಸ ತಂಡಗಳು ಮೂವರು ಆಟಗಾರರನ್ನು 33 ಕೋಟಿ ರೂ ವೆಚ್ಚ ಮಾಡಿ ಖರೀದಿಸಬಹುದು. ಮೂವರು ಆಟಗಾರರನ್ನು ರಿಟೈನ್ ಮಾಡಿಕೊಂಡರೆ 15, 11 ಮತ್ತು 7 ಕೋಟಿ ರೂ.ಗಳನ್ನು ನೀಡಿ ಖರೀದಿಸಬಹುದಾಗಿದೆ.