ನವದೆಹಲಿ: ಐಪಿಎಲ್ ಬಿಟ್ಟರೆ, ಪಾಕಿಸ್ತಾನ ಸೂಪರ್ ಲೀಗ್ ವಿಶ್ವದಲ್ಲೆ 2ನೇ ಗುಣಮಟ್ಟದ ಲೀಗ್ ಎಂದು ಹೇಳಿಕೊಳ್ಳುವ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಒಪ್ಪಂದದಂತೆ ಹಣ ನೀಡದೇ ವಂಚಿಸಿದೆ ಎಂದು ಆರೋಪಿಸಿ ಆಸ್ಟ್ರೇಲಿಯಾದ ಆಲ್ರೌಂಡರ್ ಜೇಮ್ಸ್ ಫಾಕ್ನರ್ ಲೀಗ್ ಹಂತದಲ್ಲೇ ಟೂರ್ನಿಯನ್ನು ತ್ಯಜಿಸಿ ತವರಿಗೆ ಮರಳಿದ್ದಾರೆ.
ನಾನು ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳನ್ನು ಕ್ಷಮೆ ಕೇಳುತ್ತೇನೆ. ದುರದೃಷ್ಟವಶಾತ್ ನಾನು ಪಾಕಿಸ್ತಾನ್ ಸೂಪರ್ ಲೀಗ್ನ ಕೊನೆಯ ಎರಡು ಪಂದ್ಯಗಳನ್ನು ಆಡುತ್ತಿಲ್ಲ. ಏಕೆಂದರೆ, ಒಪ್ಪಂದದಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ನನಗೆ ಪಾವತಿಸಬೇಕಾದ ಹಣವನ್ನು ನೀಡಿಲ್ಲ ಎಂದು ಫಾಕ್ನರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ, ನಾನು ಇಲ್ಲಿ ಇಡೀ ಟೂರ್ನಿಯನ್ನ ಕಳೆದಿದ್ದೇನೆ, ಅವರು ಸುಳ್ಳು ಹೇಳುವುದನ್ನು ಮುಂದುವರಿಸಿದ್ದಾರೆ. ಇಲ್ಲಿ ತುಂಬಾ ಯುವ ಪ್ರತಿಭೆಗಳು ಮತ್ತು ಅಭಿಮಾನಿಗಳು ಅದ್ಭುತವಾಗಿರುವುದರಿಂದ ಪಾಕಿಸ್ತಾನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಸಹಾಯ ಮಾಡಬೇಕೆಂದು ನಾನು ಬಯಸಿದ್ದೆ.