ನವದೆಹಲಿ:ವೇತನ ನೀಡಿಲ್ಲ ಎಂದು ಪಿಸಿಬಿ ವಿರುದ್ಧ ಜೇಮ್ಸ್ ಫಾಕ್ನರ್ ಮಾಡಿರುವ ಆರೋಪವನ್ನು ತಳ್ಳಿ ಹಾಕಿರುವ ಪಿಸಿಬಿ ಮತ್ತು ಕ್ವೆಟ್ಟಾ ಗ್ಲಾಡಿಯೇಟರ್, ಆಸ್ಟ್ರೇಲಿಯನ್ ಆಲ್ರೌಂಡರ್ರನ್ನು ಪಿಎಸ್ಎಲ್ ನಿಂದ ಅಜೀವ ನಿಷೇಧ ಹೇರಿದೆ.
ಪಿಸಿಬಿ ಮತ್ತು ಕ್ವೆಟ್ಟಾ ಗ್ಲಾಡಿಯೇಟರ್ ಫ್ರಾಂಚೈಸಿಗೆ ಜೇಮ್ಸ್ ಫಾಕ್ನರ್ ಅವರ ಖಂಡನೀಯವಾದ ನಡವಳಿಕೆಯಿಂದ ತುಂಬಾ ನಿರಾಸೆಯಾಗಿದೆ. ಫಾಕ್ನರ್ ಅವರನ್ನು ಸೇರಿದಂತೆ ಟೂರ್ನಿಯ ಭಾಗವಾಗಿರುವ ಎಲ್ಲಾ ವಿದೇಶಿ ಆಟಗಾರರನ್ನು ಅತ್ಯಂತ ಗೌರವಯುತವಾಗಿ ನೋಡಿಕೊಳ್ಳುತ್ತಿದ್ದೇವೆ. 7 ವರ್ಷಗಳ ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಯಾವುದೇ ಆಟಗಾರ ಪಿಸಿಬಿಯ ಹಣಕಾಸಿನ ಒಪ್ಪಂದದ ಬಗ್ಗೆ ಯಾವುದೇ ದೂರು ನೀಡಿಲ್ಲ ಎಂದು ಪಿಸಿಬಿ ಹೇಳಿಕೆ ಬಿಡುಗಡೆ ಮಾಡಿದೆ.
ಜೇಮ್ಸ್ ಫಾಕ್ನರ್ ಅವರ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಬೋರ್ಡ್, ಕಳೆದ ಡಿಸೆಂಬರ್ನಲ್ಲಿ ನಾವು ಫಾಕ್ನರ್ ಅವರ ಏಜೆಂಟ್ ನೀಡಿದ್ದ ಯುಕೆ ಮೂಲದ ಬ್ಯಾಂಕ್ ಖಾತೆಗೆ ಒಪ್ಪಂದದ ಹಣವನ್ನು ವರ್ಗಾಯಿಸಿದ್ದೇವೆ. ಒಪ್ಪಂದದ ಪ್ರಕಾರ ಟೂರ್ನಿಗೂ ಮುನ್ನ ಶೇ.70 ರಷ್ಟನ್ನು ನೀಡಲಾಗಿದೆ. ಟೂರ್ನಿ ಮುಗಿದ 40 ದಿನಗಳ ನಂತರ ಉಳಿದ 30 ಭಾಗವನ್ನು ನೀಡಲಾಗುವುದು ಎಂದು ಒಪ್ಪಂದದ ವೇಳೆ ತಿಳಿಸಲಾಗಿತ್ತು ಎಂದು ವಿವರಣೆ ನೀಡಿದೆ.
ಮೊದಲು ಯುಕೆ ಬ್ಯಾಂಕ್ ಖಾತೆ ನೀಡಿದ್ದ ಅವರು ನಂತರ ಆಸ್ಟ್ರೇಲಿಯಾದ ಬ್ಯಾಂಕ್ ಖಾತೆಯ ದಾಖಲೆಯನ್ನು ನೀಡಿ ಈ ಖಾತೆಗೆ ಹಣ ಹಾಕುವಂತೆ ಬೇಡಿಕೆಯಿಟ್ಟಿದ್ದರು. ಅಂದರೆ ಶೇ.70 ರಷ್ಟನ್ನು 2ನೇ ಬಾರಿ ನೀಡಬೇಕೆಂಬುದು ಅವರ ಬೇಡಿಕೆಯಾಗಿತ್ತು.