ಲಂಡನ್: ಭಾರತ ತಂಡದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಅವರನ್ನು ಸ್ಟೀವ್ ಎಂದು ಅಡ್ಡ ಹೆಸರಿನಿಂದ ಕರೆದಿದ್ದಕ್ಕೆ ಇಂಗ್ಲೆಂಡ್ ಕೌಂಟಿ ಕ್ಲಬ್ ಸಮರ್ಸೆಟ್ ಬೌಲರ್ ಜಾಕ್ ಬ್ರೂಕ್ಸ್ ಕ್ಷಮೆಯಾಚಿಸಿದ್ದಾರೆ. 2012ರಲ್ಲಿ ತಾವೂ ಮಾಡಿರುವ ಜನಾಂಗೀಯ ನಿಂದನೆ ಎಂದು ಬಿಂಬಿಸುವ ಟ್ವೀಟ್ಗಳಿಗೂ ಕ್ಷಮೆಯಾಚಿಸಿದ್ದಾರೆ.
ಪೂಜಾರ ಅವರು ಯಾರ್ಕ್ಶೈರ್ ತಂಡದಲ್ಲಿ ಆಡುತ್ತಿದ್ದ ಸಂದರ್ಭದಲ್ಲಿ ಬ್ರೂಕ್ಸ್ ಭಾರತೀಯ ಕ್ರಿಕೆಟಿಗನ ಹೆಸರನ್ನು ಕರೆಯಲು ಕಷ್ಟ ಎಂದು ಸ್ಟೀವ್ ಎಂದು ಕರೆಯುತ್ತಿದ್ದರು. ಕಳೆದ ವರ್ಷ ವರ್ಣಬೇಧ ನೀತಿ ವಿರುದ್ಧ ಸಿಡಿದೆದ್ದು ಯಾರ್ಕ್ಶೈರ್ ಕ್ಲಬ್ನಿಂದ ಹೊರಬಂದಿದ್ದ ಅಜೀಮ್ ರಫೀಕ್ ಕ್ಲಬ್ನಲ್ಲಿ ತಮ್ಮನ್ನಲ್ಲದೆ ಪೂಜಾರ ಅವರನ್ನು ಕೂಡ ಜನಾಂಗೀಯವಾಗಿ ನಿಂದಿಸಿದ್ದರು ಎಂದು ಆರೋಪಿಸಿದ್ದರು.