ದುಬೈ:ನ್ಯೂಜಿಲ್ಯಾಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತದ ಶ್ರೇಯಸ್ ಅಯ್ಯರ್ ಮತ್ತು ಶುಭಮನ್ ಗಿಲ್ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಏರಿಕೆ ಕಂಡರೆ, ವಿಶ್ರಾಂತಿಯಲ್ಲಿರುವ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಒಂದು ಅಂಕ ಜಾರಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಬುಧವಾರ ಬಿಡುಗಡೆ ಮಾಡಿದ ಶ್ರೇಯಾಂಕ ಪಟ್ಟಿಯಲ್ಲಿ ಅಯ್ಯರ್ ಮತ್ತು ಗಿಲ್ ಸರಣಿಯಲ್ಲಿ ಅರ್ಧಶತಕ ದಾಖಲಿಸಿದ್ದು, ಕ್ರಮವಾಗಿ 6 ಮತ್ತು 3 ಸ್ಥಾನಗಳ ಜಿಗಿತ ಕಂಡು 27 ಮತ್ತು 34 ನೇ ಸ್ಥಾನಕ್ಕೆ ಲಗ್ಗೆ ಇಟ್ಟರು. ಮೊದಲ ಪಂದ್ಯದಲ್ಲಿ ಅರ್ಧಶತಕ ಬಾರಿಸಿದಾಗ್ಯೂ ಶಿಖರ್ ಧವನ್ ಎರಡು ಸ್ಥಾನ ಕುಸಿದರು. ಇನ್ನು ಸರಣಿಯಲ್ಲಿ ವಿಶ್ರಾಂತಿ ಪಡೆದಿರುವ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ತಲಾ 1 ಸ್ಥಾನ ಕುಸಿದು ಕ್ರಮವಾಗಿ 8 ಮತ್ತು 9ನೇ ಸ್ಥಾನದಲ್ಲಿದ್ದಾರೆ.