ಬರ್ಮಿಂಗ್ಹ್ಯಾಮ್:ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಐದನೇ ಟೆಸ್ಟ್‌ನ ಎರಡನೇ ದಿನ ಇಂಗ್ಲೆಂಡ್ನ ಸ್ಟುವರ್ಟ್ ಬ್ರಾಡ್ ಒಂದೇ ಓವರ್‌ನಲ್ಲಿ 35 ರನ್ ನೀಡಿ ಮತ್ತೊಮ್ಮೆ ದುಬಾರಿ ಬೌಲಿಂಗ್ನಿಂದ ಸುದ್ದಿಯಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ತಂಡದ ಸಹ ಬೌಲರ್ ಜೇಮ್ಸ್ ಆ್ಯಂಡರ್ಸನ್, ಇದು ಬಹಳ ದುರದೃಷ್ಟಕರ ಎಂದು ಸಹ ಆಟಗಾರನ ಬೆಂಬಲಕ್ಕೆ ನಿಂತಿದ್ದಾರೆ.
ಪಂದ್ಯದ ಎರಡನೇ ದಿನವಾದ ಶನಿವಾರ ಬ್ರಾಡ್ ಎಸೆದ 84ನೇ ಓವರ್‌ನಲ್ಲಿ 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗಿಳಿದ ಭಾರತ ತಂಡದ ನಾಯಕ ಜಸ್ಪ್ರೀತ್ ಬುಮ್ರಾ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್ ಸಿಡಿಸಿದ್ದರು. ಈ ಓವರ್‌ನಲ್ಲಿ ವೈಡ್, ಬೈ ಹಾಗೂ ನೋಬಾಲ್ ಸೇರಿದಂತೆ 35 ರನ್ ಹರಿದುಬಂದಿತ್ತು. ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ದುಬಾರಿ ಓವರ್ ಎಂಬ ಕೆಟ್ಟ ಹಣೆಪಟ್ಟಿ ಬ್ರಾಡ್ ಪಾಲಾಗಿದೆ. ಅಲ್ಲದೆ, ಈ ಓವರ್ 2007ರ ಟಿ20 ವಿಶ್ವಕಪ್ನಲ್ಲಿ ಯುವರಾಜ್ ಸಿಂಗ್ ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ ಬಾರಿಸಿದ್ದ 6 ಸಿಕ್ಸರ್ ನೆನಪು ಮರುಕಳಿಸುವಂತೆ ಮಾಡಿತು.