ನವದೆಹಲಿ:ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ 'ಟೈಮ್ ಔಟ್' ನೀತಿಯಿಂದ ಯಾವುದೇ ಎಸೆತ ಎದುರಿಸದೇ ಔಟಾದ ಶ್ರೀಲಂಕಾದ ಬ್ಯಾಟರ್ ಏಂಜೆಲೊ ಮ್ಯಾಥ್ಯೂಸ್ ಅವರು ಬಾಂಗ್ಲಾದೇಶ ತಂಡ ಹಾಗೂ ನಾಯಕ ಶಕೀಬ್ ಅಲ್ ಹಸನ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಎದುರಾಳಿ ತಂಡದ ಕ್ರಮವು ನಿಸ್ಸಂಶಯವಾಗಿ ಅವಮಾನಕರವಾಗಿದೆ. ಕಳೆದ 15 ವರ್ಷಗಳ ನನ್ನ ಅಂತರರಾಷ್ಟ್ರಿಯ ಕ್ರಿಕೆಟ್ ಆಟದಲ್ಲಿ ಇಂತಹ ಕೆಳಮಟ್ಟದ ಯಾವುದೇ ತಂಡ ಅಥವಾ ಆಟಗಾರನನ್ನು ನೋಡಿಲ್ಲ ಎಂದರು.
ಕ್ರಿಕೆಟ್ ನಿಯಮಗಳ ಪ್ರಕಾರ, ಒಂದು ವಿಕೆಟ್ ಪತನದ ನಂತರ ಅಥವಾ ಬ್ಯಾಟರ್‌ನ ನಿವೃತ್ತಿಯ ಬಳಿಕ ಬರುವ ಬ್ಯಾಟರ್ 2 ನಿಮಿಷಗಳಲ್ಲಿ ಮುಂದಿನ ಚೆಂಡನ್ನು ಎದುರಿಸಲು ಸಿದ್ಧರಾಗಿಬೇಕು. ಇದನ್ನು ಪೂರೈಸದಿದ್ದರೆ ಆಟಗಾರ ಔಟ್ ಎಂದು ಘೋಷಿಸಲಾಗುತ್ತದೆ. ಇದಕ್ಕೆ 'ಟೈಮ್ ಔಟ್' ಎಂದು ಕರೆಯಲಾಗುತ್ತದೆ. ದೆಹಲಿಯಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಶ್ರೀಲಂಕಾ ಆಲ್ರೌಂಡರ್ ಏಂಜೆಲೊ ಮ್ಯಾಥ್ಯೂಸ್ ತಮ್ಮ ಮೊದಲ ಚೆಂಡನ್ನು ಎದುರಿಸಲು ಎರಡು ನಿಮಿಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದ್ದರಿಂದ ಬಾಂಗ್ಲಾ ನಾಯಕ, ಬೌಲರ್ ಶಕೀಬ್ ಅಲ್ ಹಸನ್ ಮನವಿ ಮೇರೆಗೆ ಎಸೆತ ಎದುರಿಸುವ ಮುನ್ನವೇ ಪೆವಿಲಿಯನ್‌ಗೆ ಮರಳಬೇಕಾಯಿತು. ಈ ಮೂಲಕ ಮ್ಯಾಥ್ಯೂಸ್ ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ 'ಟೈಮ್ ಔಟ್'ಗೆ ಗುರಿಯಾದ ಮೊದಲ ಆಟಗಾರ ಎಂದೆನಿಸಿದರು.
ಈ ಕುರಿತು ಪ್ರತಿಕ್ರಿಯಿಸಿರುವ ಲಂಕಾ ಆಟಗಾರ, ''ಇದು ನಿಜವಾಗಿಯೂ ಶಕೀಬ್ ಹಾಗೂ ಬಾಂಗ್ಲಾದೇಶದಿಂದ ನಡೆದ ಅವಮಾನ. ಇಂತಹ ಕೆಳಮಟ್ಟದ ವರ್ತನೆಯಿಂದ ಅವರು ವಿಕೆಟ್ ಪಡೆಯಲು ಬಯಸಿದ್ದರೆ, ಅದು ತೀರಾ ತಪ್ಪು. ಬಾಂಗ್ಲಾದೇಶ ಆಟದ ನಡೆಯು ತುಂಬಾ ನಿರಾಶಾದಾಯಕ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
''ನಾನು ಎರಡು ನಿಮಿಷದೊಳಗೆ ಕ್ರೀಸ್‌ಗೆ ಬಂದಿದ್ದೆ. ಕ್ರೀಸ್ನಲ್ಲಿದ್ದಾಗಲೇ ಹೆಲ್ಮೆಟ್ ಪಟ್ಟಿ ಒಡೆದಿತ್ತು. ಇದನ್ನು ಅಂಪೈರ್ ಕೂಡ ಗಮನಿಸಿದರು. ಇನ್ನೂ ಐದು ಸೆಕೆಂಡ್ಗಳು ಬಾಕಿ ಇತ್ತು. ಬಳಿಕ ನಾನು ಹೆಲ್ಮೆಟ್ ತೋರಿಸಿದ ನಂತರ ಅಂಪೈರ್, ಬಾಂಗ್ಲಾದೇಶದ ಮನವಿ ಬಗ್ಗೆ ತಿಳಿಸಿದರು. ಹೀಗಾಗಿ ನನ್ನ ಎರಡು ನಿಮಿಷಗಳು ಇನ್ನೂ ಕಳೆದಿಲ್ಲ. ನಿಮಗೆ ಸಾಮಾನ್ಯ ಜ್ಞಾನ ಎಲ್ಲಿದೆ ಎಂದು ನಾನು ಕೇಳಿದೆ'' ಎಂದು ಮ್ಯಾಥ್ಯೂಸ್ ವಿವರಿಸಿದರು.