ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿರುವ ಬೇರೆ ಬೇರೆ ಆಟಗಾರರು ಗೆಲುವಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದು, ತಂಡ ಎಬಿಡಿ ವಿಲಿಯರ್ಸ್ ಅವರಂತಹ ಆಟಗಾರರನ್ನು ಹೆಚ್ಚು ಅವಲಂಬಿಸುವುದನ್ನು ಕಡಿಮೆ ಮಾಡುತ್ತಿದ್ದಾರೆ ಎಂದು ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್ವೆಲ್ ಹೇಳಿದ್ದಾರೆ.
ಆರ್ಸಿಬಿ ಮೊದಲ ಹಂತದ ಐಪಿಎಲ್ನಲ್ಲಿ ಅತ್ಯುತ್ತಮ ಯಶಸ್ಸು ಸಾಧಿಸಿತ್ತು. ಆದರೆ ಯುಎಇಯಲ್ಲಿ ಲೀಗ್ ಪುನಾರಂಭಗೊಂಡ ನಂತರ ಸತತ 2 ಪಂದ್ಯಗಳಲ್ಲಿ ಸೋಲುಕಂಡು ನಿರಾಸೆ ಅನುಭವಿಸಿತ್ತು. ಆದರೆ ಕಳೆದೆರಡು ಪಂದ್ಯಗಳಲ್ಲಿ ಅದ್ಭುತವಾಗಿ ಕಮ್ಬ್ಯಾಕ್ ಮಾಡಿ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
"ಗೆಲುವಿಗಾಗಿ ಒಬ್ಬ ಆಟಗಾರರನನ್ನು ಅವಲಂಭಿಸದೆ ವಿಭಿನ್ನವಾಗಿ ಕಾರ್ಯನಿರ್ವಹಿಸುವ ಹುಡುಗರ ಗುಂಪನ್ನು ಹೊಂದಿರುವುದು ತುಂಬಾ ಉತ್ತಮವಾಗಿದೆ. ಅಲ್ಲದೆ ಅವರೆಲ್ಲರೂ ತಂಡದ ಯಶಸ್ಸಿಗಾಗಿ ತಮ್ಮ ಕೈಲಾದ ಅಳಿಲು ಸೇವೆಯನ್ನು ನೀಡುತ್ತಿದ್ದಾರೆ. ಇದೊಂದು ಆನಂದಿಸುವ ಗುಂಪು" ಎಂದು ತಮ್ಮ ತಂಡವನ್ನು ಮ್ಯಾಕ್ಸ್ವೆಲ್ ಕೊಂಡಾಡಿದ್ದಾರೆ.