ನವದೆಹಲಿ:ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ ನಂತರ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೆ ಈಗ ವೆಸ್ಟ್ ಇಂಡೀಸ್‌ನಲ್ಲಿ ಸರಣಿ (WI Tests series) ಆಡಲು ಟೀಮ್ ಇಂಡಿಯಾ ಹೋಗಬೇಕಾಗಿದೆ. ಈ ಪ್ರವಾಸಕ್ಕೆ ಹೊರಡುವ ಮೊದಲು ಭಾರತ ತಂಡದ ಹಲವು ಆಟಗಾರರು ದೇಶೀಯ ಕ್ರಿಕೆಟ್‌ನಲ್ಲಿ ಲಯವನ್ನು ಕಂಡಕೊಳ್ಳಲು ಆಡುತ್ತಿದ್ದಾರೆ. ಆದರೆ ಇಶಾನ್ ಕಿಶನ್ ವಿಚಾರದಲ್ಲಿ ಇದು ತದ್ವಿರುದ್ಧವಾಗಿದೆ.
ಆಸ್ಟ್ರೇಲಿಯಾ ವಿರುದ್ಧ ನಡೆದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ನಂತರ ಟೀಂ ಇಂಡಿಯಾ ಆಟಗಾರರು ಸುಮಾರು ಒಂದು ತಿಂಗಳ ಕಾಲ ವಿಶ್ರಾಂತಿ ಪಡೆದಿದ್ದಾರೆ. ಇದೀಗ ಭಾರತ ತಂಡ ಮುಂದಿನ ತಿಂಗಳು ಜುಲೈ 12 ರಂದು ಕಣಕ್ಕಿಳಿಯಲಿದೆ. ಭಾರತವು ವೆಸ್ಟ್ ಇಂಡೀಸ್ ವಿರುದ್ಧ ಮೂರು ಮಾದರಿಯ ಸರಣಿಗಳನ್ನು ಆಡಬೇಕಾಗಿದೆ. ಈ ಮಧ್ಯೆ ಹಲವು ಆಟಗಾರರು ದೇಶೀಯ ಕ್ರಿಕೆಟ್‌ನತ್ತ ಮುಖ ಮಾಡಿದ್ರೆ, ಇನ್ನು ಕೆಲವರು ಬಂದ ಅವಕಾಶವನ್ನು ಕಳೆದುಕೊಂಡಿದ್ದಾರೆ.
ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತ ತಂಡ 2 ಟೆಸ್ಟ್, 3 ಏಕದಿನ ಮತ್ತು 5 ಟಿ20 ಪಂದ್ಯಗಳ ಸರಣಿಗಳನ್ನು ಆಡಲಿದೆ. ಈ ಪ್ರವಾಸದಲ್ಲಿ ಟೀಂ ಇಂಡಿಯಾ ಜುಲೈ 12 ರಂದು ಮೊದಲ ಪಂದ್ಯವನ್ನು ಆಡಬೇಕಿದೆ. ಟೆಸ್ಟ್ ಸರಣಿಯೊಂದಿಗೆ ಪ್ರವಾಸ ಆರಂಭವಾಗಲಿದೆ. ಈ ಪ್ರವಾಸದ ಮೊದಲು ಆರ್ ಅಶ್ವಿನ್ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ಆಡಲು ನಿರ್ಧರಿಸಿದ್ದಾರೆ. ಇನ್ನು ಕೆಎಸ್ ಭರತ್ ದುಲೀಪ್ ಟ್ರೋಫಿಯಲ್ಲಿ ಆಡಲಿದ್ದಾರೆ.
ವೆಸ್ಟ್ ಇಂಡೀಸ್ ಪ್ರವಾಸ ಇನ್ನು ಒಂದು ತಿಂಗಳು ಬಾಕಿಯಿದೆ. ಆದರೆ, ಇಶಾನ್ ಕಿಶನ್ ದುಲೀಪ್ ಟ್ರೋಫಿಗಾಗಿ ಪೂರ್ವ ವಲಯ ತಂಡದಿಂದ ತಮ್ಮ ಹೆಸರನ್ನು ಹಿಂಪಡೆದಿದ್ದಾರೆ. ಹೀಗಾಗಿ ಭಾರತ ಎ ತಂಡದ ಆಟಗಾರ ಅಭಿಮನ್ಯು ಈಶ್ವರನ್ ತಂಡದ ನಾಯಕನಾಗಿದ್ದು, ಭಾರತದ ಮಾಜಿ ಸ್ಪಿನ್ನರ್ ಶಹಬಾಜ್ ನದೀಮ್ ಉಪನಾಯಕ ಆಗಿದ್ದಾರೆ.