ಲಖನೌ :ಕಳೆದ ಕೆಲ ತಿಂಗಳಿಂದ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದ ಟೀಂ ಇಂಡಿಯಾ ಯಂಗ್ ಬ್ಯಾಟರ್ ಇಶಾನ್ ಕಿಶನ್ ನಿನ್ನೆ ಶ್ರೀಲಂಕಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದು, ಇದರ ಶ್ರೇಯ ಕೋಚ್ ರಾಹುಲ್ ದ್ರಾವಿಡ್ ಹಾಗೂ ಕ್ಯಾಪ್ಟನ್ ರೋಹಿತ್ ಶರ್ಮಾಗೆ ನೀಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಉತ್ತಮ ಆರಂಭದ ಹೊರತಾಗಿ ದೊಡ್ಡ ಸ್ಕೋರ್ ಸೇರಿಸಲು ವಿಫಲವಾಗ್ತಿದ್ದ ಇಶಾನ್, ನಿನ್ನೆಯ ಪಂದ್ಯದಲ್ಲಿ 56 ಎಸೆತಗಳಲ್ಲಿ 89ರನ್ಗಳಿಕೆ ಮಾಡಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಪಂದ್ಯ ಮುಗಿದ ಬಳಿಕ ಮಾತನಾಡಿದ ಇಶಾನ್, ಭರ್ಜರಿ ಫಾರ್ಮ್ಗೆ ಮರಳಲು ಕಾರಣರಾದವರ ಬಗ್ಗೆ ಮಾತನಾಡಿದ್ದಾರೆ.
ನನ್ನ ಮೇಲಿನ ನಂಬಿಕೆ ಕಳೆದುಕೊಳ್ಳದೇ ಬೆಂಬಲಿಸಿ, ಮತ್ತೊಂದು ಅವಕಾಶ ನೀಡಿದ ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅನೇಕ ಸಲಹೆ, ಸೂಚನೆ ನೀಡಿದ್ದರಿಂದಲೇ ನಾನು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು ಎಂದಿದ್ದಾರೆ.
ಇದನ್ನೂ ಓದಿರಿ:ಗಂಗೂಲಿ, ದ್ರಾವಿಡ್ ವಿರುದ್ಧದ ಹೇಳಿಕೆ: ವೃದ್ಧಿಮಾನ್ ಸಹಾ ವಿರುದ್ಧ ಬಿಸಿಸಿಐ ಕಠಿಣ ಕ್ರಮ!?
ಯುವ ಪ್ಲೇಯರ್ಸ್ ಉತ್ತಮ ಮನಸ್ಥಿತಿ ಕಾಯ್ದುಕೊಳ್ಳಬೇಕಾದರೆ ಹಿರಿಯ ಪ್ಲೇಯರ್ಸ್ ಸಹಾಯ ಅಗತ್ಯವಾಗಿರುತ್ತದೆ. ಈ ವಿಷಯದಲ್ಲಿ ರಾಹುಲ್ ಸರ್, ವಿರಾಟ್ ಭಾಯ್ ಹಾಗೂ ರೋಹಿತ್ ಭಾಯ್ ನನಗೆ ಸಹಾಯ ಮಾಡಿದ್ದಾರೆ. ಉತ್ತಮ ಪ್ರದರ್ಶನ ಹೊರಬಾರದ ಸಂದರ್ಭದಲ್ಲಿ ಹೇಗಿರಬೇಕು ಎಂಬುದನ್ನ ಅವರು ನನಗೆ ತಿಳಿಸಿದ್ದಾರೆ ಎಂದರು.
ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಇಶಾನ್
ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ವೇಳೆ ನಾನು ಚೆನ್ನಾಗಿ ಬ್ಯಾಟ್ ಬೀಸಿರಲಿಲ್ಲ. ಇದರ ಹೊರತಾಗಿ ಕೂಡ ಲಂಕಾ ವಿರುದ್ಧದ ಸರಣಿಯಲ್ಲಿ ನನ್ನ ಮೇಲೆ ನಂಬಿಕೆ ಇಟ್ಟು, ಅವಕಾಶ ನೀಡಿದ್ದರಿಂದ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಇಶಾನ್ ಕಿಶನ್ ದಾಖಲೆಯ 15.25 ಕೋಟಿ ರೂ.ಗೆ ಮುಂಬೈ ಇಂಡಿಯನ್ಸ್ ತಂಡದ ಪಾಲಾಗಿದೆ. ಇದರ ಬೆನ್ನಲ್ಲೇ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಅವರು ಮೂರು ಪಂದ್ಯಗಳಿಂದ ಕೇವಲ 71ರನ್ಗಳಿಕೆ ಮಾಡಿ ನಿರಾಶೆ ಮೂಡಿಸಿದ್ದರು.