ಬಾರ್ಬಡೋಸ್ (ವೆಸ್ಟ್ ಇಂಡೀಸ್): ಭಾರತ ಕ್ರಿಕೆಟ್ ತಂಡದ ಫ್ಯೂಚರ್ ಸ್ಟಾರ್ ಆಟಗಾರರ ಪಟ್ಟಿಯಲ್ಲಿ ಇಶಾನ್ ಕಿಶನ್ ಸಹ ಒಬ್ಬರು. ಸದ್ಯ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತ ತಂಡದಲ್ಲಿ ವಿಕೆಟ್ ಕೀಪರ್ ಕಮ್ ಬ್ಯಾಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಏಕದಿನ ಸರಣಿಯ ಮೊದಲೆರಡು ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಕಿಶನ್ ಉತ್ತಮ ಲಯದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲಿ ಅರ್ಧಶತಕ ದಾಖಲಿಸಿದ ಕಿಶನ್ ಸಚಿನ್ ದಾಖಲೆಯನ್ನು ಮುರಿದರು.
ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿರುವ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಸರಣಿಯಲ್ಲಿ ನಾಯಕ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಿದ ಕಾರಣ ಗಿಲ್ ಜೊತೆ ಇಶಾನ್ ಕಿಶನ್ ಪಂದ್ಯವನ್ನು ಆರಂಭ ಮಾಡಿದರು. ಮೊದಲ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ತಮ್ಮ ಸ್ಥಾನವನ್ನು ಯುವ ಆಟಗಾರನಿಗೆ ಬಿಟ್ಟುಕೊಟ್ಟು 7ನೇ ಸ್ಥಾನದಲ್ಲಿ ಬ್ಯಾಟಿಂಗ್ಗೆ ಇಳಿದಿದ್ದರು. ಈ ಎರಡೂ ಪಂದ್ಯದಲ್ಲಿ ಆರಂಭಿಕರಾಗಿ ಉತ್ತಮ ಪ್ರದರ್ಶನ ನೀಡಿದ ವಿಕೆಟ್ ಕೀಪರ್ ಕಮ್ ಬ್ಯಾಟರ್ ಇಶಾನ್ ಕಿಶನ್ ಏಕದಿನ ಕ್ರಿಕೆಟ್ನಲ್ಲಿ ಆರಂಭಿಕರಾಗಿ ಸಚಿನ್ ತೆಂಡೂಲ್ಕರ್ ಮಾಡಿದ್ದ ದಾಖಲೆಯನ್ನು ಮುರಿದರು.
25 ವರ್ಷದ ಬಿಹಾರದ ಬ್ಯಾಟರ್ ಕಿಶನ್ ಬ್ಯಾಕ್-ಟು-ಬ್ಯಾಕ್ ಅರ್ಧಶತಕದೊಂದಿಗೆ ದಂತಕಥೆ ಸಚಿನ್ ತೆಂಡೂಲ್ಕರ್ ನಿರ್ಮಿಸಿದ ದೀರ್ಘಾವಧಿಯ ದಾಖಲೆಯನ್ನು ಮುರಿದು ಭಾರತೀಯ ಆರಂಭಿಕರ ಎಲೈಟ್ ಪಟ್ಟಿಯಲ್ಲಿ ನಂ. 1 ಸ್ಥಾನವನ್ನು ತಲುಪಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಆರಂಭಿಕರಾಗಿ ಐದು ಇನ್ನಿಂಗ್ಸ್‌ನಲ್ಲಿ ಇಂಡಿಯಾ ಪರ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಈ ಮೊದಲು ತೆಂಡೂಲ್ಕರ್ ಅವರ ಹೆಸರಿನಲ್ಲಿತ್ತು. ಈಗ ಕಿಶನ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.