ಪೋರ್ಟ್ ಆಫ್ ಸ್ಪೇನ್:ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಬಿಗಿ ಹಿಡಿತ ಸಾಧಿಸಿದೆ. ಸೋಮವಾರ ಕೊನೆಯ ದಿನವಾಗಿದ್ದು, ವಿಂಡೀಸ್ಗೆ ಗೆಲ್ಲಲು 289 ರನ್ ಬೇಕಿವೆ. ಕೈಯಲ್ಲಿ 8 ವಿಕೆಟ್ಗಳಿವೆ. 4 ನೇ ದಿನದಾಟದಲ್ಲಿ ಭರ್ಜರಿ ಬ್ಯಾಟ್ ಮಾಡಿದ ರೋಹಿತ್ ಪಡೆ ಕೆರೆಬಿಯನ್ನರಿಗೆ 365 ರನ್ಗಳ ಬೃಹತ್ ಗುರಿ ನೀಡಿದೆ.
4 ನೇ ದಿನದಾಟದಲ್ಲಿ ಹೊಡಿಬಡಿ ಆಟಕ್ಕಿಳಿದ ಭಾರತ 2 ವಿಕೆಟ್ಗೆ 181 ರನ್ ಗಳಿಸಿತು. ರೋಹಿತ್ ಕೇವಲ 44 ಎಸೆತಗಳಲ್ಲಿ 57 ರನ್ ಬಾರಿಸಿದರೆ, ಜೈಸ್ವಾಲ್ 38, ಶುಭ್ಮನ್ ಗಿಲ್ 29, ಇಶಾನ್ ಕಿಶನ್ ಸ್ಫೋಟಕ 52 ರನ್ ಮಾಡಿದರು. ನಾಲ್ಕನೇ ಕ್ರಮಾಂಕದಲ್ಲಿ ಸಹಜವಾಗಿ ವಿರಾಟ್ ಕೊಹ್ಲಿ ಬ್ಯಾಟಿಂಗ್ಗೆ ಇಳಿಯುತ್ತಾರೆ. ಆದರೆ, ಇಶಾನ್ ಕಿಶನ್ ಮೈದಾನಕ್ಕಿಳಿದು ಭರ್ಜರಿ ಬ್ಯಾಟ್ ಬೀಸಿದರು.
ಭಾರತದ ಪ್ಲಾನ್ ಸಕ್ಸಸ್:ಕಡಿಮೆ ಅವಧಿಯಲ್ಲಿ ಹೆಚ್ಚು ರನ್ ಮಾಡುವ ಯೋಜನೆಯೊಂದಿಗೆ 2 ನೇ ಇನಿಂಗ್ಸ್ ಆರಂಭಿಸಿದ ಭಾರತ ತಂಡ ಅಂದುಕೊಂಡಂತೆ ಮಾಡಿತು. ಆರಂಭಿಕ ಜೋಡಿ ರೋಹಿತ್- ಜೈಸ್ವಾಲ್ 12 ಓವರ್ಗಳಲ್ಲಿ 98 ರನ್ ಅಬ್ಬರದ ಜೊತೆಯಾಟ ನೀಡಿದರು. ಇಬ್ಬರೂ ಔಟಾದ ಬಳಿಕ ಶುಭ್ಮನ್ ಗಿಲ್ ಜೊತೆ ನಾಲ್ಕನೇ ಕ್ರಮಾಂಕಕ್ಕೆ ಕಿಶನ್ ಮೈದಾನಕ್ಕಿಳಿದರು. ಇದು ಅಚ್ಚರಿಗೆ ಕಾರಣವಾಗಿತ್ತು.
ಕಿಶನ್ ಸೂಚಿಸಿದ ವಿರಾಟ್:ನಾಲ್ಕನೇ ಕ್ರಮಾಂಕಕ್ಕೆ ವಿರಾಟ್ ಬದಲಾಗಿ ಇಶಾನ್ ಕಿಶನ್ ಅವರನ್ನು ಆಡಲು ತಂಡ ನಿರ್ಧರಿಸಿತು. ಇದರ ಪ್ರಸ್ತಾಪ ಮಾಡಿದ್ದೇ ವಿರಾಟ್ ಕೊಹ್ಲಿ ಎಂಬುದು ವಿಶೇಷ. ಡ್ರೆಸ್ಸಿಂಗ್ ರೂಮ್ನಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಇಶಾನ್ ಕಿಶನ್ರನ್ನು ಕಳುಹಿಸಲು ಸಲಹೆ ಬಂದಿತು. ಇದಕ್ಕೆ ತಂಡ ಒಪ್ಪಿತು.