ಮುಂಬೈ:ಶ್ರೀಲಂಕಾ ವಿರುದ್ಧದ ಟಿ20 ಸರಣಿ ನಾಳೆಯಿಂದ ಆರಂಭವಾಗಲಿದೆ. ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಂಡದ ನೇತೃತ್ವ ವಹಿಸಿಕೊಂಡಿದ್ದಾರೆ. ಕಾಯಂ ನಾಯಕ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಾಗಿದೆ. ಹಾರ್ದಿಕ್ ಪಾಂಡ್ಯ ಅವರನ್ನು ಟಿ20ಗೆ ಕಾಯಂ ನಾಯಕನನ್ನಾಗಿ ಮಾಡಬೇಕು ಎಂಬ ಕೂಗು ಇದೆ. ಆದರೆ, ಇದಕ್ಕೆ ಮಾಜಿ ಕ್ರಿಕೆಟಿಗ, ಆಲ್ರೌಂಡರ್ ಇರ್ಫಾನ್ ಪಠಾಣ್ ತುಸು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕ್ರೀಡಾ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಇರ್ಫಾನ್ ಪಠಾಣ್ ಮಾತನಾಡಿ, ಹಾರ್ದಿಕ್ ಪಾಂಡ್ಯ ಸದ್ಯದ ಭಾರತ ತಂಡದ ಸ್ಟಾರ್ ಆಲ್ರೌಂಡರ್ ಎಂಬುದನ್ನು ಒಪ್ಪಿಕೊಳ್ಳುವೆ. ಅವರ ಆಟ ನಿಜಕ್ಕೂ ಅದ್ಭುತ. ಅವರನ್ನು ಶ್ರೀಲಂಕಾ ಸರಣಿಗೆ ನಾಯಕರನ್ನಾಗಿ ಮಾಡಿದ್ದು ಉತ್ತಮವಾಗಿದೆ. ಆದರೆ, ಭವಿಷ್ಯದಲ್ಲಿ ಕಾಯಂ ನಾಯಕನನ್ನಾಗಿ ಮಾಡುವುದರ ಬಗ್ಗೆ ಆಯ್ಕೆ ಸಮಿತಿ ತುಸು ಯೋಚಿಸಬೇಕು ಎಂದು ಹೇಳಿದ್ದಾರೆ.
ಹಾರ್ದಿಕ್ ಪಾಂಡ್ಯ ಈ ಹಿಂದೆ ಸತತವಾಗಿ ಗಾಯಕ್ಕೆ ಒಳಗಾಗಿದ್ದಾರೆ. ಕಾಯಂ ನಾಯಕನನ್ನಾಗಿ ಘೋಷಿಸಿದಾಗ ಅವರು ಯಾವುದಾದರೂ ಸರಣಿಯ ವೇಳೆ ಗಾಯಗೊಂಡಲ್ಲಿ ಬದಲಿ ನಾಯಕನನ್ನು ಹುಡುಕಬೇಕಾಗುತ್ತದೆ. ಇದು ತಂಡದ ಮೇಲೆ ಪರಿಣಾಮ ಬೀರಲಿದೆ. ಸದ್ಯದ ಅವರ ದೈಹಿಕ ಸಾಮರ್ಥ್ಯವನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.